ಮೌಂಟ್ ಎವರೆಸ್ಟ್ನಲ್ಲಿ ಹಿಮಪಾತ: 12 ಸಾವು
ಕಠ್ಮಂಡು: ಜಗತ್ ಪ್ರಸಿದ್ಧ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಪರ್ವತದಲ್ಲಿ ಶುಕ್ರವಾರ ಹಿಮಪಾತ ಸಂಭವಿಸಿದ್ದು, ಹಿಮಪಾತಕ್ಕೆ 12 ಮಂದಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
ರಜಾ ದಿನವಾಗಿದ್ದರಿಂದ ಪರ್ವತಾರೋಹಿಗಳು ಎವರೆಸ್ಟ್ ಏರಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಇಂದು ಬೆಳಗ್ಗೆ ತುತ್ತ ತುದಿಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಈಗಾಗಲೇ 12 ಮಂದಿ ಮೃತ ಪಟ್ಟಿದ್ದು, ರಕ್ಷಣಾ ಸಿಬ್ಬಂದಿ ಈ ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ನೇಪಾಳ ಪರ್ವತಾರೋಹಣ ಸಂಘದ ಅಧ್ಯಕ್ಷರಾದ ತ್ಸೆರಿಂಗ್ ಶರ್ಪಾ ಅವರು ತಿಳಿಸಿದ್ದಾರೆ.
ಮೃತರು ಹಾಗೂ ನಾಪತ್ತೆಯಾದವರು ಪರ್ವತಾರೋಹಿಗಳಿಗೆ ಸಹಕರಿಸುವ ಶೇರ್ಪಾ ಜನಾಂಗದವರೆಂದು ನೇಪಾಲ ಪ್ರವಾಸೋಧ್ಯಮ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಪರ್ವತಾರೋಹಿಗಳು ಆಗಮಿಸಿರುವುದರಿಂದ ನೂರಾರು ಪರ್ವತಾರೋಹಿಗಳು ಹಿಮಪಾತದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹೆಲಿಕಾಫ್ಟರ್ ಮೂಲಕ ಪರ್ವತಾರೋಹಿಗಳನ್ನು ರಕ್ಷಿಸುವ ಕೆಲಸ ಭರದಿಂದ ಸಾಗಿದೆ.