ಕಾಶ್ಮೀರ ವಿವಾದ: ಗಿಲಾನಿ ಆರೋಪ ತಳ್ಳಿ ಹಾಕಿದ ಬಿಜೆಪಿ
ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತನ್ನ ಬಳಿ...
ನವದೆಹಲಿ: ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತನ್ನ ಬಳಿ ಗುಪ್ತಚಾರಿಗಳನ್ನು ಕಳುಹಿಸಿದ್ದರು ಎಂದ ಕಾಶ್ಮೀರ ಪ್ರತೇಕತವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ.
ಮೋದಿ ಕಾಶ್ಮೀರ ವಿವಾದ ಕುರಿತು ಚರ್ಚಿಸಲು ಹಾಗೂ ಸೈಯದ್ ಅಲಿ ಶಾ ಗಿಲಾನಿ ಅವರನ್ನು ಭೇಟಿ ಮಾಡಲು ಯಾವ ಗುಪ್ತಚಾರಿಗಳನ್ನು ಕಳುಹಿಸಲಿರಲಿಲ್ಲ, ಬಿಜೆಪಿ ನಾಯಕನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಬಿಜೆಪಿ ಹೇಳಿದೆ.
ಮೋದಿ ಮೇಲೆ ಸುಳ್ಳು ಆರೋಪ ಮಾಡಿರುವ ಸೈಯದ್ ಅಲಿ ಶಾ ಗಿಲಾನಿ ಕೂಡಲೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮೋದಿ ಹೆಸರಿಗೆ ಮಸಿ ಬಳಿಯಲೆಂದು ಗಿಲಾನಿ ಈ ಸುಳ್ಳು ಆರೋಪವನ್ನು ಮಾಡಿದ್ದಾರೆ. ಈ ರೀತಿ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಗೊಂದಲವನ್ನು ಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂದು ಬಿಜೆಪಿ ಆಪಾದಿಸಿದೆ.
ಮಾರ್ಚ್ 22ರಂದು ಚಿಕಿತ್ಸೆಗಾಗಿ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೋದಿ, ಗುಪ್ತಚಾರಿಗಳನ್ನು ನನ್ನ ಬಳಿ ಕಳುಹಿಸಿ ತಮ್ಮ ಭೇಟಿಗೆ ಸಂದೇಶವನ್ನು ಕಳುಹಿಸಿದ್ದರು. ಆದರೆ ಮೋದಿ ಆರ್ಎಸ್ಎಸ್ ಹಿನ್ನಲೆಯಿಂದ ಬಂದವರಾದ್ದರಿಂದ ಅವರ ಭೇಟಿಗೆ ನಾನು ನಿರಾಕರಿಸಿದೆ ಎಂದು ಸೈಯದ್ ಅಲಿ ಶಾ ಗಿಲಾನಿ ಹೇಳಿಕೊಂಡಿದ್ದರು.
ಈ ಹೇಳಿಕೆಯನ್ನು ತಳ್ಳಿಹಾಕಿರುವ ಬಿಜೆಪಿ, ಇದೊಂದು ಸುಳ್ಳು ಆರೋಪ ಎಂದಿದ್ದು, ಕೂಡಲೇ ಗಿಲಾನಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.