ಬಳ್ಳಾರಿ ಬಳಿ ಕರ್ನಾಟಕ-ಆಂಧ್ರ ಗಡಿ ಸರ್ವೆ ಕಾರ್ಯಾರಂಭ
ಗಡಿ ಒತ್ತುವರಿ ಕುರಿತಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಬಳ್ಳಾರಿ ಗಡಿ..
ಬಳ್ಳಾರಿ: ಗಡಿ ಒತ್ತುವರಿ ಕುರಿತಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಬಳ್ಳಾರಿ ಗಡಿ ಭಾಗದಲ್ಲಿ ಸರ್ವೆ ಆಫ್ ಇಂಡಿಯಾ ಶನಿವಾರ ಸರ್ವೆ ಕಾರ್ಯ ಆರಂಭಿಸಿದೆ.
ಅಕ್ರಮ ಗಣಿಗಾರಿಕೆಯಿಂದಾಗಿ ಗಡಿ ಬದಲಾವಣೆಯಾಗಿರುವ ಕರ್ನಾಟಕ-ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಸಮೀಕ್ಷೆ ಮಾಡಿ ಗಡಿ ಗುರುತಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ವೆ ಆಫ್ ಇಂಡಿಯಾದ ಸ್ವರ್ಣಂ ಸುಬ್ಬಾರಾವ್ ನೇತೃತ್ವದ ತಂಡ ಇಂದಿನಿಂದ ಗಡಿ ಸರ್ವೆ ಕಾರ್ಯ ಆರಂಭಿಸಿದ್ದು, ಈ ಸರ್ವೆಯಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ.
ಕ್ರಮ ಗಣಿಗಾರಿಕೆ ನಡೆಸಿದ ಕೆಲವು ಕಂಪನಿಗಳು ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡ ಗಡಿ ಭಾಗವನ್ನೆ ಬದಲಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಸಿಇಸಿ ಶಿಫಾರಸಿನಂತೆ ಗಡಿ ಗುರುತಿಸಿದ ನಂತರ ನಾಲ್ಕು ಗಣಿ ಕಂಪನಿಗಳ ಅರ್ಜಿ ವಿಲೇವಾರಿ ಮಾಡುವುದಾಗಿ ಹಸಿರುಪೀಠ ತಿಳಿಸಿತ್ತು. ಉಭಯ ರಾಜ್ಯಗಳ ಸಮನ್ವಯತೆ ಕೊರತೆಯಿಂದಾಗಿ ಗಡಿ ಗುರುತಿಸುವ ಕೆಲಸ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಉಭಯ ರಾಜ್ಯಗಳು ಗಡಿ ಸಮೀಕ್ಷೆಗೆ ಸಹಕಾರ ನೀಡುವಂತೆ ಅಕ್ಟೋಬರ್ 28, 2013ರಂದು ಕೋರ್ಟ್ ಸೂಚಿಸಿತ್ತು.
ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ ಅವರು ಅಕ್ರಮ ಗಣಿಗಾರಿಕೆ ತಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ತನಿಖೆ ನಡೆಸಿದ ಸಿಇಸಿ ಅಕ್ರಮ ಗಣಿಗಾರಿಕೆ ನಡೆಸಿದ ಕಂಪನಿಗಳು ಗಡಿಯನ್ನೇ ಬದಲು ಮಾಡಿರುವುದನ್ನು ಪತ್ತೆ ಹಚ್ಚಿತ್ತು. ಅಲ್ಲದೇ ವಾಸ್ತವಿಕ ಗಡಿ ಗುರುತಿಸುವಂತೆಯೂ ಶಿಫಾರಸು ಮಾಡಿತ್ತು. ಸಿಇಸಿ ಶಿಫಾರಸಿನಂತೆ ಸುಪ್ರೀಂ ಕೋರ್ಟ್ ಗಡಿ ಗುರುತಿಸಲು ಆದೇಶಿಸಿದೆ.