ಸ್ಪಾಟ್ ಫಿಕ್ಸಿಂಗ್ ತನಿಖೆಗೆ ಹೊಸ ಸಮಿತಿ ರಚನೆ
ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್‌ನ 6ನೇ ಆವೃತ್ತಿಯ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆಗೆ ನೂತನ ತನಿಖಾ ಸಮಿತಿಯನ್ನು ಬಿಸಿಸಿಐ ಭಾನುವಾರ ರಚನೆ ಮಾಡಿದೆ.
ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಿಸಿಸಿಐ ತುರ್ತುಸಭೆ ನಡೆಸಿ ಪ್ರಕರಣದ ತನಿಖೆಗೆ ಮೂವರು ಸದಸ್ಯರನ್ನೊಳಗೊಂಡ ತನಿಖಾ ಸಮಿತಿಯೊಂದನ್ನು ರಚಿಸಿದ್ದು, ಸಿಬಿಐ ಮಾಜಿ ನಿರ್ದೇಶಕ ಡಾ.ಆರ್.ಕೆ ರಾಘವನ್, ಜೆ.ಎನ್ ಪಟೇಲ್ ಹಾಗೂ ರವಿಶಾಸ್ತ್ರಿ ತಂಡದಲ್ಲಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಯುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಬಿಸಿಸಿಐ ವಿರುದ್ಧ ಕಿಡಿಕಾರಿತ್ತು. ಈ ಹಿನ್ನೆಲೆಯಲ್ಲಿ ಇಂದು ದಿಢೀರ್ ಸಭೆ ನಡೆಸಿದ ಬಿಸಿಸಿಐ ತನ್ನ ಕಾರ್ಯಕಾರಿ ಸಮಿತಿಯಲ್ಲಿ ಹೊಸ ತನಿಖಾ ತಂಡ ರಚನೆಯ ನಿರ್ಧಾರ ಕೈಗೊಳ್ಳಲಾಗಿದೆ.
ಕಳೆದ ವರ್ಷ ನಡೆದ ಇಂಡಿಯನ್ ಪ್ರಿಮಿಯರ್ ಲೀಗ್‌ನ ಆರನೇ ಆವೃತ್ತಿಯಲ್ಲಿ ಆಟಗಾರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು. ಇದರಲ್ಲಿ ರಾಜಸ್ಥಾನ ರಾಯಲ್ಸ್‌ನ ಕೆಲ ಆಟಗಾರರ ಹೆಸರು ಬಹಿರಂಗಗೊಂಡು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಂತರ ಪ್ರಕರಣದ ತನಿಖೆಗೆ ಬಿಸಿಸಿಐ ಸಮಿತಿಯೊಂದನ್ನು ರಚನೆ ಮಾಡಿತ್ತು. ಆದರೆ ಆ ಸಮಿತಿ ಸೂಕ್ತವಾಗಿ ತನಿಖೆ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ದೂರಿತ್ತು.
ಅಲ್ಲದೆ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಮಾಲೀಕರಾಗಿದ್ದ ಗುರುನಾಥ್ ಮೇಯಪ್ಪನ್ ಹಾಗೂ ಸಿಕೆಎಸ್‌ನ ಮುಖ್ಯಸ್ಥ ಶ್ರೀನಿವಾಸ್‌ನ ಹೆಸರು ಕೇಳಿ ಬಂದಿತ್ತು. ಹೀಗಾಗಿ ಸುಪ್ರೀಂಕೋರ್ಟ್ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಶ್ರೀನಿವಾಸನ್‌ರನ್ನು ಪದಚ್ಯುತಿಗೊಳಿಸಿತ್ತು.