ತೇಜಪಾಲ್ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು
ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ತೆಹಲ್ಕಾ ...
ನವದೆಹಲಿ: ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ತೆಹಲ್ಕಾ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜಪಾಲ್ ಜಾಮೀನು ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ.
ನ್ಯಾಯಾಮೂರ್ತಿ ಪಿ.ಸದಾಶಿವಂ ಅವರನ್ನೊಳಗೊಂಡ ನ್ಯಾಯಾಪೀಠ ತರುಣ್ ತೇಜಪಾಲ್ ಜಾಮೀನು ಅರ್ಜಿ ವಿಚಾರಣೆ ಸಮ್ಮತಿಸಿದ್ದು, ಗೋವಾ ಪೊಲೀಸರಿಗೆ ನೋಟೀಸ್ ಜಾರಿ ಮಾಡಿದೆ.
ಇಲ್ಲಿಯವರೆಗೂ ತೇಜಪಾಲ್ ಅವರಿಗೆ ಜಾಮೀನು ಸಿಗದಿರುವುದಕ್ಕೆ ಕಾರಣ ನೀಡುವಂತೆ ಗೋವಾ ಪೊಲೀಸರಿಗೆ ಸೂಚಿಸಿದ್ದು, 4 ವಾರಗಳ ಗಡುವು ನೀಡಿದೆ.
ತೇಜಪಾಲ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ತೇಜಪಾಲ್ ಸುಪ್ರೀಂ ಮೊರೆ ಹೋಗಿದ್ದರು.
ಗೋವಾದ ಪಂಚತಾರ ಹೋಟೆಲೊಂದರಲ್ಲಿ ಆಯೋಜಿಸಲಾಗಿದ್ದ ತೆಹಲ್ಕಾ ಪತ್ರಿಕೆಯ ಕಾರ್ಯಕ್ರಮದ ವೇಳೆ ಕಿರಿಯ ಪತ್ರಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕಳೆದ ನವೆಂಬರ್ 30ರಂದು ತೇಜ್ಪಾಲ್ರನ್ನು ಗೋವಾ ಪೊಲೀಸರು ಬಂಧಿಸಿದ್ದರು.