ದಾಂಪತ್ಯಕ್ಕೆ ಕಾಲಿಟ್ಟ ರಾಣಿ ಮುಖರ್ಜಿ
ದೀರ್ಘಕಾಲ ಪ್ರಣಯದಲ್ಲಿದ್ದ ಬಾಲಿವುಡ್ ನಟಿ ರಾಣಿ ಮುಖರ್ಜಿ ಮತ್ತು ಖ್ಯಾತ ನಿರ್ದೇಶಕ..
ಮುಂಬೈ: ದೀರ್ಘಕಾಲ ಪ್ರಣಯದಲ್ಲಿದ್ದ ಬಾಲಿವುಡ್ ನಟಿ ರಾಣಿ ಮುಖರ್ಜಿ ಮತ್ತು ಖ್ಯಾತ ನಿರ್ದೇಶಕ, ನಿರ್ಮಾಪಕ ಆದಿತ್ಯ ಚೋಪ್ರಾ ಇಟಲಿಯಲ್ಲಿ ಸದ್ದಿಲ್ಲದೆ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.
ಖ್ಯಾತ ನಿರ್ದೇಶಕ ಯಶ್ ಚೋಪ್ರಾ ಮತ್ತು ಪಮೇಲಾ ಚೋಪ್ರಾ ಅವರ ಪುತ್ರನಾಗಿರುವ ಆದಿತ್ಯ ಚೋಪ್ರಾ ಮೂರು ಬಾರಿ ದೇಶೀಯ ಪ್ರಶಸ್ತಿ ಗಳಿಸಿದ ನಿರ್ದೇಶಕರಾಗಿದ್ದಾರೆ.
ರಾಣಿ ಮುಖರ್ಜಿ ಮತ್ತು ಆದಿತ್ಯ ಚೋಪ್ರಾ ದೀರ್ಘ ಕಾಲ ಪ್ರಣಯದಲ್ಲಿದ್ದು, ಮದುವೆಗೆ ಸ್ನೇಹಿತರು, ಆಪ್ತರಿಗಷ್ಟೇ ಆಮಂತ್ರಣ ನೀಡಲಾಗಿತ್ತು.
ಈ ಹಿಂದೆ ಪಾಯಲ್ ಖನ್ನಾ ಅವರನ್ನು ಮದುವೆಯಾಗಿದ್ದ ಆದಿತ್ಯ ಚೋಪ್ರಾ 2009ರಲ್ಲಿ ಆಕೆಗೆ ವಿಚ್ಛೇದನ ನೀಡಿದ್ದರು. ತದನಂತರ ರಾಣಿ ಜತೆಗೆ ಲವ್ನಲ್ಲಿ ಬಿದ್ದಿರುವುದು ಸುದ್ದಿಯಾಗಿತ್ತು.
ರಾಣಿ ಮತ್ತು ಆದಿತ್ಯ ಚೋಪ್ರಾರ ಏಪ್ರಿಲ್ 21ರಂದು ಇವರಿಬ್ಬರೂ ಇಟೆಲಿಯಲ್ಲಿ ಮದುವೆಯಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ ಎಂದು ಯಶ್ ರಾಜ್ ಫಿಲ್ಮ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟವಾದ ನಂತರವೇ ರಾಣಿ ಮದುವೆಯ ಬಗ್ಗೆ ಎಲ್ಲರಿಗೂ ಗೊತ್ತಾಗಿದ್ದು.
ಮದುವೆಯ ನಂತರ ಮಾಧ್ಯಮದವರಿಗೆ ಹೇಳಿಕೆ ನೀಡಿದ ರಾಣಿ ಮುಖರ್ಜಿ, ನಾನು ಮದುವೆಯಾಗಿರುವ ವಿಷಯವನ್ನು ನಮ್ಮ ಅಭಿಮಾನಿಗಳಲ್ಲಿ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಇಟೆಲಿಯಲ್ಲಿ ನಾವಿಬ್ಬರೂ ಮದುವೆಯಾಗಿದ್ದು, ಮದುವೆಗೆ ಆಪ್ತರಿಗಷ್ಟೇ ಆಮಂತ್ರಣ ನೀಡಲಾಗಿತ್ತು. ಈ ಖುಷಿಯ ಕ್ಷಣದಲ್ಲಿ ನಾನು ಯಶ್ ಅಂಕಲ್ನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರ ಆಶೀರ್ವಾದ ಮತ್ತು ಅಕ್ಕರೆ ಯಾವತ್ತೂ ನನ್ನ ಮತ್ತು ಆದಿಗೆ ಇದ್ದೇ ಇರುತ್ತದೆ. ಕಲ್ಪಿತಕಥೆಗಳನ್ನು ಮತ್ತು ದೇವರ ಮೇಲೆ ನಂಬಿಕೆಯಿರಿಸಿದ ನನ್ನ ಜೀವನವೂ ಕಲ್ಪಿತ ಕತೆಯಂತೆ ಮುಂದುವರಿಯುತ್ತಿರುವುದು ನೋಡಿ ಖುಷಿಯಾಗುತ್ತಿದೆ. ನಾನೀಗ ನನ್ನ ಜೀವನದ ಮುಖ್ಯ ಅಧ್ಯಾಯವನ್ನು ಶುರು ಮಾಡಿದ್ದೇನೆ- ಕಲ್ಪಿತಕತೆ ಮುಂದುವರಿಯುತ್ತಿದೆ ಎಂದು ಹೇಳುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ.