ನನ್ನ ಪತಿಯ ಮೇಲೆ ವ್ಯಥಾರೋಪ ಮಾಡಲಾಗುತ್ತಿದೆ: ಪ್ರಿಯಾಂಕಾ
ನನ್ನ ಪತಿಯ ವಿರುದ್ಧ ವ್ಯಥಾರೋಪ ಮಾಡಲಾಗುತ್ತಿದೆ ಎಂದು ಹೇಳಿದ..
ರಾಯ್ ಬರೇಲಿ: ನನ್ನ ಪತಿಯ ವಿರುದ್ಧ ವ್ಯಥಾರೋಪ ಮಾಡಲಾಗುತ್ತಿದೆ ಎಂದು ಹೇಳಿದ ಪ್ರಿಯಂಕಾ ಗಾಂಧಿ ಪತಿ ರೋಬರ್ಟ್ ವಾದ್ರಾ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.
ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮ್ಮ ಸೋನಿಯಾ ಗಾಂಧಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಿಯಾಂಕಾ, ನನ್ನ ಕುಟುಂಬದ ವಿರುದ್ಧ, ನನ್ನ ಪತಿ ವಿರುದ್ಧ ಕಟು ಮಾತುಗಳನ್ನಾಡಲಾಗುತ್ತಿದೆ. ನನಗೆ ಇದರಿಂದ ತುಂಬಾ ಬೇಸರವಾಗುತ್ತಿದೆ. ನನ್ನ ಕುಟುಂಬದ ಬಗ್ಗೆ ಈ ರೀತಿ ಹೇಳುತ್ತಿದ್ದಾರೆ ಅಂಥಲ್ಲ, ಒಬ್ಬರ ಮೇಲೆ ವ್ಯಥಾರೋಪ ಮಾಡಲಾಗುತ್ತಿದೆಯಲ್ಲಾ ಎಂದು ನನಗೆ ಬೇಸರವಾಗುತ್ತಿದೆ. ಏನಿದ್ದರೂ ಸತ್ಯ ಹೊರ ಬರಲಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಒಂದಲ್ಲ ಒಂದು ದಿನ ಸತ್ಯ ಹೊರಬಲಿದೆ ಎಂದು ನಾನು ಮಕ್ಕಳಲ್ಲಿ ಹೇಳುತ್ತಿದ್ದೇನೆ. ಈ ಎಲ್ಲ ಸಮಯಗಳಲ್ಲಿ ಹೇಗೆ ತಾಳ್ಮೆ ವಹಿಸಬೇಕೆಂಬುದನ್ನು ನಾನು ಇಂದಿರಾ ಜಿ ಅವರಿಂದ ಕಲಿತಿದ್ದೇನೆ. ಹೃದಯದಲ್ಲಿ ಸತ್ಯ ಹಾಗು ನಮ್ಮ ಉದ್ದೇಶಗಳ ಸರಿಯಾಗಿಯೇ ಇದ್ದರೆ, ನಾವು ಮಾಡುವ ಒಳ್ಳೆಯ ಕಾರ್ಯಗಳಿಂದ ನಾವು ಮತ್ತೂ ಗಟ್ಟಿಯಾಗುತ್ತಾ ಹೋಗುತ್ತೇವೆ ಎಂದು ಹೇಳಿದ ಪ್ರಿಯಾಂಕಾ ನಾನು ಸತ್ಯಕ್ಕಾಗಿ ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ಸೋನಿಯಾ ಅವರಿಗಲ್ಲ ದೇಶದ ಭವಿಷ್ಯಕ್ಕಾಗಿ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಸೋನಿಯಾ ಅವರಿಗೆ ಮತ ನೀಡಿ ಎಂದು ಪ್ರಿಯಾಂಕಾ ಮತ ಯಾಚನೆ ಮಾಡಿದ್ದಾರೆ.
ನನ್ನ ಅಮ್ಮ ಇಲ್ಲಿ ಹುಟ್ಟಿದವರಲ್ಲ, ಆದರೂ ನೀವು ಅವರನ್ನು ಸ್ವೀಕರಿಸಿದ್ದೀರಿ. ಅದು ಈ ದೇಶದ ಜನರ ಪ್ರೀತಿಯನ್ನು ತೋರಿಸುತ್ತದೆ ಎಂದು ಹೇಳಿದ ಪ್ರಿಯಾಂಕಾ ವಾದ್ರಾ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ.