ಬೇಜವಾಬ್ದಾರಿ ಹೇಳಿಕೆ ನೀಡಬೇಡಿ: ಬಿಜೆಪಿ ನಾಯಕರಿಗೆ ಮೋದಿ ಎಚ್ಚರಿಕೆ
ವಿಶ್ವ ಹಿಂದು ಪರಿಷತ್(ವಿಎಚ್‌ಪಿ) ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹಾಗೂ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರ ವಿವಾದಾತ್ಮಕ..
ನವದೆಹಲಿ: ವಿಶ್ವ ಹಿಂದು ಪರಿಷತ್(ವಿಎಚ್‌ಪಿ) ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹಾಗೂ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರ ವಿವಾದಾತ್ಮಕ ಹೇಳಿಕೆಗಳಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತೀವ್ರ ಅಸಮಾಧಾನಗೊಂಡಿದ್ದು, ಬೇಜವಾಬ್ದಾರಿ ಹೇಳಿಕೆ ನೀಡಬೇಡಿ ಎಂದು ಟ್ವಿಟ್ ಮಾಡಿದ್ದಾರೆ.
ಅಭಿವೃದ್ಧಿ ಮತ್ತು ಉತ್ತಮ ಆಡಳಿತ ನೀಡುವುದೇ ನಮ್ಮ ಉದ್ದೇಶವಾಗಿದೆ. ಹೀಗಾಗಿ ನಾನು ಬೇಜವಾಬ್ದಾರಿ ಹೇಳಿಕೆಗಳನ್ನು ವಿರೋಧಿಸುತ್ತೇನೆ ಮತ್ತು ಬಿಜೆಪಿಗೆ ಒಳಿತು ಬಯಸುವವರು ಇಂತಹ ವಿವಾದಿತ ಹೇಳಿಕೆಗಳಿಂದ ದೂರವಿರುವಂತೆ ಸೂಚಿಸಿದ್ದಾರೆ.
ಹಿಂದೂಗಳಿರುವ ಪ್ರದೇಶದಲ್ಲಿ ಮುಸ್ಲಿಮರಿಗೆ ಆಸ್ತಿ ಖರೀದಿಸಲು ಅವಕಾಶ ನೀಡಬಾರದು. ಈ ಸಂಬಂಧ ಸೂಕ್ತ ಕಾನೂನು ರಚಿಸಲು ಸರ್ಕಾರದ ಮೇಲೆ ಒತ್ತಡ ಹಾಕಿ. ಮುಸ್ಲಿಮರು ಜಾಗ ಖರೀದಿಸಿದರೂ ಆ ಆಸ್ತಿಯನ್ನು ಅತಿಕ್ರಮಣ ಮಾಡಿಕೊಳ್ಳಿ. ಬಜರಂಗದಳದ ಬೋರ್ಡ್ ಹಾಕಿ. ಮುಂದಿನ ವಿಚಾರವನ್ನು ಕೋರ್ಟ್‌ನಲ್ಲಿ ನೋಡಿಕೊಳ್ಳೋಣ. ಇಷ್ಟು ವರ್ಷವಾದರೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಿಗೇ ಶಿಕ್ಷೆಯಾಗಿಲ್ಲ. ಈ ಆಸ್ತಿ ವಿವಾದ ಕೂಡ ಶೀಘ್ರ ಇತ್ಯರ್ಥವಾಗಲ್ಲ ಎಂದು ಗುಜರಾತ್‌ನ ಭಾವನಗರದಲ್ಲಿ ಶನಿವಾರ ತೊಗಾಡಿಯಾ ಹೇಳಿದ್ದರು. ಅಲ್ಲದೆ ಮೋದಿಯನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಿ ಎಂದು ಗಿರಿರಾಜ್ ಸಿಂಗ್ ಅವರು ಹೇಳಿಕೆ ನೀಡಿದ್ದರು.
ಇನ್ನು ಮೋದಿಯವರು ತಾವು ಸೇಡಿನ ರಾಜಕಾರಣ ಮಾಡುವುದಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರನ್ನು ಗುರಿ ಮಾಡಿ ಯಾವುದೇ ತನಿಖೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಪಕ್ಷದ ಹಿರಿಯ ನಾಯಕಿ ಉಮಾ ಭಾರತಿ ಮಾತ್ರ ಬಿಜೆಪಿ ಅಧಿಕಾರಕ್ಕೆ ಬಂದರೆ ವಾದ್ರಾರನ್ನು ಜೈಲಿಗಟ್ಟುವುದಾಗಿ ಘೋಷಿಸಿದ್ದಾರೆ. ನಾಯಕರ ಈ ವಿವಾದಾತ್ಮಕ ಹೇಳಿಕೆಗೆ ಕಡಿವಾಣ ಹಾಕಲು ಮೋದಿ ಮುಂದಾಗಿದ್ದು, ವಿವಾದಿತ ಹೇಳಿಕೆಗಳಿಂದ ದೂರವಿರುವಂತೆ ಕೇಳಿಕೊಂಡಿದ್ದಾರೆ.