ವಾರಾಣಸಿಯಿಂದ ಕೇಜ್ರಿವಾಲ್ ನಾಮಪತ್ರ ಸಲ್ಲಿಕೆ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುತ್ತಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್...
ವಾರಾಣಸಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುತ್ತಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಬುಧುವಾರ ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ವಾರಾಣಸಿ ಗೆಲುವಿಗಾಗಿ ಭಾರಿ ಪೈಪೋಟಿ ಆರಂಭವಾಗಿದೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಭಾರಿ ಸಂಖ್ಯೆಯ ಬೆಂಬಲಿಗರೊಂದಿಗೆ ಅರವಿಂದ್ ಕೇಜ್ರಿವಾಲ್ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
2014ರ ಚುನಾವಣೆ ಬಡತನ ಮತ್ತು ಭ್ರಷ್ಟಾಚಾರದ ನಡುವಿನ ಹೋರಾಟ ಎಂದು ಕೇಜ್ರಿವಾಲ್ ಹೇಳಿದರು.
ಚುನಾವಣೆಗೆ ಖರ್ಚು ಮಾಡಲು ನನ್ನ ಬಳಿ ಹಣ ಇಲ್ಲ. ನನ್ನ ಪರ್ಸ್ನಲ್ಲಿ ಕೇವಲ 500 ರುಪಾಯಿ ಮತ್ತು ಒಂದು ಹಳೆ ಜೀಪ್ ಇದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಕೋಟಿ ಕೋಟಿ ಖರ್ಚು ಮಾಡುತ್ತಾರೆ ಮತ್ತು ಕೇವಲ ಹೆಲಿಕಾಪ್ಟರ್ನಲ್ಲಿ ಬಂದು ಕೈ ಬೀಸಿ ಹೋಗುತ್ತಾರೆ. ಇವರ ಬಗ್ಗೆ ನೀವು ಎಚ್ಚರಿಕೆ ವಹಿಸಬೇಕು. ಏಕೆಂದರೆ ಇವರನ್ನು ನೀವು ಕೇವಲು ಹೆಲಿಕಾಪ್ಟರ್ನಲ್ಲಿ ಮಾತ್ರ ನೋಡಬಹುದು. ಯಾವುದೇ ಕಾರಣಕ್ಕೂ ನೀವು ಅವರನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆ ಹೇಳಿಕೊಳ್ಳಲು ಆಗುವುದಿಲ್ಲ. ಅವರು ನಿಮ್ಮ ಕೈಗೆ ಸಿಗುವುದೂ ಇಲ್ಲ. ಆದರೆ ನಾನು ನಿಮ್ಮೊಂದಿಗೆ ಇದ್ದು ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದರು.