ಶಕುಂತಲಾ ಬಂಗಾರಪ್ಪ ಪಂಚಭೂತಗಳಲ್ಲಿ ಲೀನ
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ ಅವರು ಬುಧವಾರ ಪಂಚಭೂತಗಳಲ್ಲಿ ಲೀನವಾದರು.
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ ಅವರು ಬುಧವಾರ ಪಂಚಭೂತಗಳಲ್ಲಿ ಲೀನವಾದರು.
ಬಂಗಾರಪ್ಪ ಅವರ ಪುತ್ರರಾದ ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಅವರು ಇಂದು ತಮ್ಮ ವೈಮನಸ್ಸು ಮರೆತು ತಾಯಿ ಶಕುಂತಲಾ ಬಂಗಾರಪ್ಪ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾದರು. ಕಿರಿಯ ಪುತ್ರ ಮಧು ಬಂಗಾರಪ್ಪ ಅವರು ತಾಯಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಇದಕ್ಕೆ ಕುಮಾರ್ ಬಂಗಾರಪ್ಪ ಸಹ ಸಾಥ್ ನೀಡಿದರು.
ಶಕುಂತಲಾ ಅವರ ಪಾರ್ಥಿವ ಶರೀರವನ್ನು ನಿನ್ನೆ ಬೆಂಗಳೂರಿನಿಂದ ಸೊರಬ ತಾಲೂಕಿನ ಕುಬಟೂರಿಗೆ ಕೊಂಡೊಯ್ದು, ಇಂದು ಬೆಳಗ್ಗೆ 8ಗಂಟೆಯಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಅಂತಿಮ ದರ್ಶನ ಪಡೆಯಲು ತೆರಳಿದ್ದ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಅವರಿಗೆ ಅವರ ಸಹೋದರಿಯರು ಮತ್ತು ಮಧು ಬಂಗಾರಪ್ಪ ಅವರ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಅಲ್ಲದೆ ಇಬ್ಬರು ಸಹೋದರರ ಮಧ್ಯ ತೀವ್ರ ವಾಗ್ವಾದ ಸಹ ನಡೆಯಿತು. ಅಂತಿಮವಾಗಿ ನಟ ಶಿವರಾಜ್‌ಕುಮಾರ್ ಅವರು ಮಧ್ಯೆಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಬಳಿಕ ಇಬ್ಬರು ಸಹೋದರರು ಅಂತಿಮ ವಿಧಿ-ವಿಧಾನಗಳಲ್ಲಿ ಭಾಗಿಯಾಗಿದರು.
ಶಕುಂತಲಾ ಅವರ ಪಾರ್ಥಿವ ಶರೀರವನ್ನು ಕುಬಟೂರಿನಿಂದ ತೆರೆದ ವಾಹನದಲ್ಲಿ ಸೊರಬಕ್ಕೆ ಕೊಂಡೊಯ್ದು, ಬಳಿಕ ಮಧ್ಯಾಹ್ನ ನಾಲ್ಕು ಗಂಟೆಯ ಸುಮಾರಿಗೆ ಸೊರಬದಲ್ಲಿರುವ ಬಂಗಾರ ಧಾಮದಲ್ಲಿ ಶಕುಂತಲಾ ಅವರ ಅಂತ್ಯಸಂಸ್ಕಾರ ನಡೆಸಲಾಯಿತು. ಒಂದೇ ವಾಹನದಲ್ಲಿ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಹಾಗೂ ಅವರು ಮೂವರು ಸಹೋದರಿಯರಾದ ಗೀತಾ ಶಿವರಾಜ್ ಕುಮಾರ್, ಅನಿತಾ ಹಾಗೂ ಸುಜಾತಾ ಮತ್ತು ನಟ ಶಿವರಾಜ್ ಕುಮಾರ ಸಹ ಇದ್ದರು.
ಬಂಗಾರಪ್ಪ ನಿಧನರಾದ ಸಂದರ್ಭದಲ್ಲಿ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಅವರಿಗೆ ಸಂಸ್ಕಾರ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಎರಡನೇ ಪುತ್ರ ಮಧು ಬಂಗಾರಪ್ಪ ಅವರೇ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು.