ಬಂಧನ ಭೀತಿ: ತಲೆಮರೆಸಿಕೊಂಡ ಗಿರಿರಾಜ್ ಸಿಂಗ್
ಪಾಟ್ನಾ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಲಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಹಾರದ ಬಿಜೆಪಿ ನಾಯಕ ಗಿರಿರಾಜ್ ಸಿಂಗ್‌ರನ್ನು ಬಂಧಿಸಲು ಬಂದ ಪೊಲೀಸರು ಬರಿಗೈಲಿ ವಾಪಸಾಗಿದ್ದಾರೆ.
ಪ್ರಚೋದನಾತ್ಮಕ ಹೇಳಿಕೆ ಹಿನ್ನೆಲೆ ಗಿರಿರಾಜ್ ಸಿಂಗ್‌ರ ವಿರುದ್ಧ ಬೊಕಾರೋ ನ್ಯಾಯಾಲಯವು ಹೊರಡಿಸಿರುವ ಜಾಮೀನು ರಹಿತ ವಾರೆಂಟ್ ಆದೇಶದ ಮೇರೆಗೆ ಇಂದು ಬೆಳಗ್ಗೆ 5 ಗಂಟೆಯ ಸಮಯದಲ್ಲಿ ಗಿರಿರಾಜ್‌ರ ಮನೆ ಮೇಲೆ ಬೊಕಾರೋ ಮತ್ತು ಪಾಟ್ನಾ ಪೊಲೀಸರು ಜಂಟಿ ದಾಳಿ ನಡೆಸಿದ್ದು, ಈ ವೇಳೆ ಸಿಂಗ್ ಅವರು ತಮ್ಮ ಮನೆಯಲ್ಲಿ ಕಾಣಸಿಗಲಿಲ್ಲ ಎಂದು ನಗರ ಪೊಲೀಸ್ ಮೇಲ್ವಿಚಾರಕ ಜಯಕಾಂತ್ ಅವರು ಹೇಳಿದ್ದಾರೆ.
ಗಿರಿರಾಜ್ ಸಿಂಗ್ ಅವರು ಕೋರ್ಟ್‌ಗೆ ಹಾಜರಾಗುವ ಮುನ್ನು ಬಂಧಿಸುವುದಾಗಿ ಜಾಖಂರ್ಡ್ ಪೊಲೀಸರು ತಿಳಿಸಿದ್ದು, ಪ್ರಸ್ತುತ ನಗರದಲ್ಲಿ ಬೀಡು ಬಿಟ್ಟಿದ್ದಾರೆ.
ನಿನ್ನೆ ಜಾರ್ಖಂಡ್ ನ್ಯಾಯಾಲಯ ಗಿರಿರಾಜ್ ಸಿಂಗ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಗಿರಿರಾಜ್ ಸಿಂಗ್, ನಿನ್ನೆ ಈ ಸಂಬಂಧ ಮಾತನಾಡಿ, ನಾನು ನಿರಪರಾಧಿ ಹಾಗೂ ಮುಗ್ಧ ಎಂದಿದ್ದರು. ಅಲ್ಲದೆ ಖುದ್ದು ಇಂದು ಕೋರ್ಟ್ ಮುಂದೆ ಹಾಜರಾಗುವುದಾಗಿ ತಿಳಿಸಿದ್ದರು.
ಇದೇ ಏಪ್ರಿಲ್ 18ರಂದು ಜಿಲ್ಲೆಯಲ್ಲಿ ನಡೆದಿದ್ದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗಿರಿರಾಜ್ ಸಿಂಗ್ ಅವರು, ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದ್ವೇಷಿಸುವವರು ಮತ್ತು ಟೀಕಿಸುವವರು ಭಾರತದಲ್ಲಿ ಇರಲು ಲಾಯಕ್ಕಲ್ಲ. ಅವರು ಪಾಕಿಸ್ತಾನಕ್ಕೆ ಹೋಗಬಹುದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಗಿರಿರಾಜ್ ಅವರ ಹೇಳಿಕೆ ವೈಯುಕ್ತಿಕವಾಗಿದ್ದು ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಬಿಜೆಪಿ ಕೂಡ ಗಿರಿರಾಜ್ ಅವರ ಹೇಳಿಕೆಯನ್ನು ಖಂಡಿಸುತ್ತದೆ ಎಂದು ಹೇಳಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿರಾಜ್ ಸಿಂಗ್ ವಿರುದ್ಧ ಜಾರ್ಖಂಡ್‌ನ ಬೋಕಾರೋ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಐಪಿಸಿ ಸೆಕ್ಷನ್ 153 ಎ(2 ವರ್ಗಗಳನ್ನು ಪರಸ್ಪರ ಎತ್ತಿಕಟ್ಟುವದು), 295 ಎ(ಧಾರ್ಮಿಕ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟು ಮಾಡುವಂತಹ ವರ್ತನೆ) ಮತ್ತು 298(ಕೀಳು ಮಟ್ಟದ ಪದ ಬಳಕೆಯಿಂದ ಒಂದು ಕೋಮನ್ನು ಹೀಗಳೆಯುವುದು)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.