ವಾರಾಣಸಿ 'ವಾರ್': ನಾಮಪತ್ರ ಸಲ್ಲಿಸಿದ ಮೋದಿ
ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ..
ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಗುರುವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಮೊಮ್ಮಗ ಅಲಹಬಾದ್ ಹೈಕೋರ್ಟ್ನ ನಿವೃತ್ತ ನ್ಯಾ. ಗಿರಿದರ್ ಮಾಳವೀಯ ಹಾಗೂ ನೇಕಾರ ಸಮುದಾಯದ ನಾಯಕ ಅಶೋಕ್ ಅವರು ಮೋದಿ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿದರು.
ಮೋದಿ ನಾಮಪತ್ರ ಸಲ್ಲಿಕೆಗು ಮುನ್ನ ಬನಾರಸ್ ಹಿಂದೂ ವಿವಿ ಆವರಣಕ್ಕೆ ತೆರಳಿ ಅಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಸುಮಾರು ಐದು ಕಿ.ಮೀ.ವರೆಗೆ ರೋಡ್ ಶೋ ನಡೆಸಿದರು. ಈ ಅದ್ಧೂರಿ ರೋಡ್ ಶೋನಲ್ಲಿ ಸುಮಾರು ಒಂದು ಲಕ್ಷ ಮಂದಿ ಭಾಗವಹಿಸಿದ್ದರು.
ವಾರಾಣಸಿ ಹಾಲಿ ಬಿಜೆಪಿ ಸಂಸದ ಮುರುಳಿ ಮನೋಹರ್ ಜೋಶಿ ಅವರು ಮೋದಿ ಅವರಿಗಾಗಿ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದ್ದರೂ ಮೋದಿ ವಿರುದ್ಧ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದಿಂದ ಹಾಗೂ ಕಾಂಗ್ರೆಸ್ನಿಂದ ಶಾಸಕ ಅಜಯ್ ರಾಯ್ ಅವರು ಕಣಕ್ಕಿಳಿದಿರಿವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆಪ್ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರು ನಿನ್ನೆಯಷ್ಟೆ ಅದ್ಧೂರಿ ರೋಡ್ ಶೋ ನಡೆಸುವ ಮೂಲಕ ತಮ್ಮ ನಾಮಪತ್ರ ಸಲ್ಲಿಸಿದ್ದರು. ಮೇ 12ರಂದು ವಾರಾಣಸಿಯಲ್ಲಿ ಚುನಾವಣೆ ನಡೆಯಲಿದೆ.
ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಬಿಜೆಪಿ ಉಸ್ತುವಾರಿ ಅಮಿತ್ ಶಾ, ರವಿಶಂಕರ್ ಪ್ರಸಾದ್ ಹಾಗೂ ಬಿಜೆಪಿ ವಕ್ತಾರ ಮುಕ್ತಾರ್ ಅಬ್ಬಾಸ್ ನಖ್ವಿ ಸೇರಿದಂತೆ ಹಲವು ನಾಯಕರು ಮೋದಿಗೆ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಮೋದಿ, ವಾರಾಣಸಿ ಕಾಶಿ ವಿಶ್ವನಾಥನ ಪವಿತ್ರ ಸನ್ನಿಧಿಯಾಗಿದೆ. ಗಂಗಾಮಾತೆಯೇ ನನ್ನನ್ನು ವಾರಾಣಸಿಗೆ ಕರೆಸಿಕೊಂಡಿದ್ದಾಳೆ. ದೇವರ ಆರ್ಶೀವಾದದಿಂದ ನಾನು ವಾರಾಣಸಿಯಿಂದ ಸ್ಪರ್ಧಿಸುತ್ತಿದ್ದೇನೆ. ಇಂದು ಕಾಶಿಯ ಜನ ನನ್ನ ಮೇಲೆ ಪ್ರೀತಿ ಮಳೆಯೇ ಸುರಿಸಿದ್ದು, ಕಾಶಿ ಜನರ ಸೇವೆ ಮಾಡಲು ದೇವರು ನನಗೆ ಶಕ್ತಿ ಕೊಟ್ಟಿದ್ದಾನೆ ಎಂದು ಹೇಳಿದರು.