ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ರಣತಂತ್ರ

ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಶತಾಯ ಗತಾಯ ಅಧಿಕಾರದಿಂದ...

Lingaraj Badiger
Updated On : 25 Apr 2014, 12:56 pm

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಶತಾಯ ಗತಾಯ ಅಧಿಕಾರದಿಂದ ದೂರವಿಡಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್, ಎನ್‌ಡಿಎಯೇತರ ಪಕ್ಷಗಳೊಂದಿಗೆ ಕೈಜೋಡಿಸಲು ಮುಂದಾಗಿದೆ.

ಹೇಗಾದರೂ ಮಾಡಿ ಮೋದಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್, ಚುನಾವಣೋತ್ತರ ಸಮೀಕ್ಷೆಗಾಗಿ ಕಾತರದಿಂದ ಕಾಯುತ್ತಿದೆ. ಆದರೆ ದೇಶಾದ್ಯಂತ ಇನ್ನು ಮೂರು ಹಂತಗಳಲ್ಲಿ 196 ಕ್ಷೇತ್ರಗಳಲ್ಲಿ ಮತದಾನ ನಡೆಯಬೇಕಿದ್ದು, ಈ ಹಂತದಲ್ಲೂ ಎನ್‌ಡಿಎಯೇತರ ಪಕ್ಷಗಳು, ಅದು ತೃತೀಯ ರಂಗ ಸೇರಿದಂತೆ ಇತರೆ ಯಾವುದೇ ಪ್ರಾದೇಶಿಕ ಪಕ್ಷಗಳನ್ನು ಸೆಳೆಯಲು ಎಲ್ಲಾ ರೀತಿಯ ಕಸರತ್ತು ನಡೆಸುತ್ತಿದೆ.

ಕೇಂದ್ರದಲ್ಲಿ ಎನ್‌ಡಿಎಯೇತರ ಸರ್ಕಾರ ರಚನೆಗಾಗಿ ಬೇಷರತ್ ಬೆಂಬಲ ಸೇರಿದಂತೆ ಎಲ್ಲಾ ಅವಕಾಶಗಳನ್ನು ಮುಕ್ತವಾಗಿಡಲು ಕಾಂಗ್ರೆಸ್ ನಿರ್ಧರಿಸಿದೆ.

ಒಂದು ವೇಳೆ ಮೋದಿ ಬಹುಮತಕ್ಕೆ ಬೇಕಾದ 272 ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿ, ಕೇವಲು 220ರಿಂದ 230ಸ್ಥಾನಗಳನ್ನು ಪಡೆದರೆ, ಆಗ ತೃತೀಯ ರಂಗ ಅಥವಾ ಇತರೆ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸಬಹುದು. ಈ ಅವಕಾಶವನ್ನು ಬಳಸಿಕೊಂಡು ಮೋದಿಯನ್ನು ಅಧಿಕಾರದಿಂದ ದೂರವಿಡಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

ಕೆಲವು ಮಾಧ್ಯಮ ಸಮೀಕ್ಷೆಗಳ ಪ್ರಕಾರ, ಎನ್‌ಡಿಎಗೆ ಸ್ಪಷ್ಟ ಬಹುಮತ ಸಿಗುವುದಿಲ್ಲ ಮತ್ತು ಆಡಳಿತಾರೂಢ ಕಾಂಗ್ರೆಸ್ 100ರಿಂದ 120 ಸ್ಥಾನ ಗೆಲ್ಲಬಹುದು ಎಂಬ ಆಧಾರದ ಮೇಲೆ ಕಾಂಗ್ರೆಸ್ ಮೋದಿಯನ್ನು ತಡೆಯುವ ರಣತಂತ್ರ ರೂಪಿಸುತ್ತಿದೆ.

ಒಂದು ವೇಳೆ ಕಾಂಗ್ರೆಸ್ 140ಕ್ಕು ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇಯಾದರೆ ಮತ್ತೆ 2004ರ ಸಮ್ಮಿಶ್ರ ಸರ್ಕಾರದ ಸೂತ್ರವನ್ನು ಅನುಸರಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ಒಟ್ಟಿನಲ್ಲಿ ಮೋದಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಹಲವು ತಂತ್ರಗಳನ್ನು ರೂಪಿಸುತ್ತಿದೆ ಮತ್ತು ಸರ್ವ ತ್ಯಾಗಕ್ಕೂ ಸಿದ್ಧವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇನ್ನು ಪ್ರಧಾನಿ ಅಭ್ಯರ್ಥಿ ಬಗ್ಗೆ ಪ್ರತಿಕ್ರಿಯಿಸಿರುವ ಮೂಲಗಳು, ತಾವು ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಉನ್ನತ ಹುದ್ದೆಯನ್ನು ಹೊಂದಬೇಕು ಎಂಬುದು ತಮ್ಮ ಉದ್ದೇಶವಲ್ಲ. ಹೀಗಾಗಿ ಯಾರೂ ಬೇಕಾದರೂ ಪ್ರಧಾನಿಯಾಗಬಹುದು ಎಂಬ ಅವಕಾಶವನ್ನು ಮುಕ್ತವಾಗಿಡಲಾಗಿದೆ.

ಈ ನಡುವೆ ಮೊದಲ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು, ಎಡರಂಗ ಪಕ್ಷಗಳು ತಮ್ಮ ಸಿದ್ಧಾಂತಗಳನ್ನು ಸ್ವವಿಮರ್ಶೆ ಮಾಡಿಕೊಳ್ಳಬೇಕು ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯುಪಿಎ-3ರ ಭಾಗವಾಗುವ ಬಗ್ಗೆ ಚಿಂತಿಸಬೇಕು ಎಂದು ಹೇಳಿದ್ದರು. ಅಲ್ಲದೆ ಚುನಾವಣೆ ನಂತರ ಕಾಂಗ್ರೆಸ್‌ನೊಂದಿಗೆ ಕೈಜೋಡಿಸದಿರಲು ನಿರ್ಧರಿಸಿರುವ ಪ್ರಾದೇಶಿಕ ಪಕ್ಷಗಳು ಸಹ ಮರು ಚಿಂತನೆ ನಡೆಸಬೇಕು ಎಂದು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement