ಕೆಂಪುಕೋಟೆ ದಾಳಿ: ಉಗ್ರ ಆರಿಫ್ ಗಲ್ಲು ಶಿಕ್ಷೆಗೆ ಸುಪ್ರೀಂ ತಡೆ
2000ರಲ್ಲಿ ಕೆಂಪುಕೋಟೆ ಮೇಲೆ ದಾಳಿ ಮಾಡಿದ್ದ...
ನವದೆಹಲಿ: 2000ರಲ್ಲಿ ಕೆಂಪುಕೋಟೆ ಮೇಲೆ ದಾಳಿ ಮಾಡಿದ್ದ ಲಷ್ಕರ್-ಇ-ತೊಯಿಬಾ ಸಂಘಟನೆಯ ಉಗ್ರ ಮೊಹ್ಮದ್ ಆರಿಫ್ ಗಲ್ಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಗಲ್ಲು ಶಿಕ್ಷೆ ವಿಳಂಬವಾದ ಹಿನ್ನೆಲೆಯಲ್ಲಿ ತನ್ನ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಕೋರಿ ಆರಿಫ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿ, ಪ್ರಕರಣದ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
ನಾನು ಈಗಾಗಲೇ 14 ವರ್ಷ ಜೈಲಿನಲ್ಲಿ ಕಳೆದಿದ್ದೇನೆ ಮತ್ತು ನನ್ನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಉಗ್ರ ತನ್ನ ಅರ್ಜಿಯಲ್ಲಿ ಹೇಳಿಕೊಂಡಿದ್ದಾನೆ.
ಡಿಸೆಂಬರ್ 22, 2000ದಲ್ಲಿ ದೆಹಲಿಯ ಕೆಂಪುಕೋಟೆ ಮೇಲೆ ದಾಳಿ ಮಾಡಿ ಇಬ್ಬರು ಯೋಧರು ಸೇರಿದಂತೆ ಮೂವರನ್ನು ಹತ್ಯೆ ಮಾಡಿದ್ದ ಉಗ್ರ ಆರಿಫ್ಗೆ ಆಗಸ್ಟ್, 2011ರಲ್ಲಿ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ಖಾಯಂಗೊಳಿಸಿತ್ತು.