ತಡವಾದ ಪ್ರಿಯಾಂಕಾ ಪ್ರಚಾರ: 'ಕೈ' ತಪ್ಪಿದ ಮತ ಲಾಭ
ಕಾಂಗ್ರೆಸ್‌ನ ಪ್ರಮುಖ ಎದುರಾಳಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ನೇರ ವಾಗ್ದಾಳಿ ನಡೆಸುವ ಮೂಲಕ...
ನವದೆಹಲಿ: ಕಾಂಗ್ರೆಸ್‌ನ ಪ್ರಮುಖ ಎದುರಾಳಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ನೇರ ವಾಗ್ದಾಳಿ ನಡೆಸುವ ಮೂಲಕ ಈಗ ಪ್ರಮುಖ ಆಕರ್ಷಣೆಯಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ತುಂಬಾ ತಡವಾಗಿ ಆಖಾಡಕ್ಕೆ ಇಳಿದರು ಎನ್ನಲಾಗುತ್ತಿದೆ.
ದೇಶದ ಪ್ರತಿಷ್ಟಿತ ರಾಜಕೀಯ ಕುಟುಂಬದ ಪ್ರಿಯಾಂಕಾ ಗಾಂಧಿ, ತಮ್ಮ ಸಹೋದರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪರವಾಗಿ ಈಗ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಅವರು ಚುನಾವಣಾ ಪ್ರಚಾರಕ್ಕೆ ಬಂದಿದ್ದು ತುಂಬಾ ತಡವಾಯಿತು. ಸ್ವಲ್ಪ ಮುಂಚೆ ಬಂದಿದ್ದರೇ ಇತರೆ ಕಡೆಯೂ ಕಾಂಗ್ರೆಸ್‌ಗೆ ಲಾಭ ತರುವ ಸಾಧ್ಯತೆ ಇತ್ತು ಎಂದು ವಿಶ್ಲೇಷಿಸಲಾಗುತ್ತಿದೆ.
ನೋಡಲು ಪಕ್ಕಾ ತಮ್ಮ ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹಾಗೆ ಇರುವ ಪ್ರಿಯಾಂಕಾ ಗಾಂಧಿ ಜನರನ್ನು ಬಹುಬೇಗ ಆಕರ್ಷಿಸುತ್ತಿದ್ದಾರೆ. ಒಂದು ಹಂತದಲ್ಲಿ ಪ್ರಿ.ಯಾಂಕಾ ಗಾಂಧಿ ಅವರು ನರೇಂದ್ರ ಮೋದಿಯ ವಿರುದ್ಧವೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಪ್ರಿಯಾಂಕಾ ಮುಂದೆ ರಾಹುಲ್ ಮಂಕಾಗಬಹುದು ಎಂಬ ಆತಂಕದಿಂದ ತಾಯಿ ಸೋನಿಯಾ ಇದಕ್ಕೆ ಅವಕಾಶ ನೀಡಲಿಲ್ಲ ಎನ್ನಲಾಗುತ್ತಿದೆ.
ಮೋದಿ ಹಾಗೂ ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಪ್ರಿಯಾಂಕಾ, ಪ್ರಧಾನಿಯಂತಹ ಪ್ರಮುಖ ಹುದ್ದೆಯ ಆಕಾಂಕ್ಷಿಯಾಗಿರುವವರು ಮಕ್ಕಳಂತೆ ವರ್ತಿಸಬಾರದು ಎಂದು ಮೋದಿಯನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ ಇತ್ತೀಚಿಗೆ ಜನರನ್ನು ಒಗ್ಗೂಡಿಸುವುದು ಕಾಂಗ್ರೆಸ್‌ನ ಉದ್ದೇಶ... ಆದರೆ ಜನರನ್ನು ಒಡೆಯುವುದು ಪ್ರತಿಪಕ್ಷ ಬಿಜೆಪಿಯ ಉದ್ದೇಶ ಎಂದು ಹೇಳಿದ್ದರು.