ಗಣಿ ಅಕ್ರಮ: ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ಮುಂದಾದ ಸರ್ಕಾರ
ಅಕ್ರಮ ಗಣಿಗಾರಿಕೆ ವಿರುದ್ಧ ವಿಧಾನಸಭೆ ಒಳಗು...
ಬೆಂಗಳೂರು: ಅಕ್ರಮ ಗಣಿಗಾರಿಕೆ ವಿರುದ್ಧ ವಿಧಾನಸಭೆ ಒಳಗು, ಹೊರಗೂ ಹಾಗೂ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಈಗ ಅದೇ ಅಕ್ರಮ ಗಣಿಗಾರಿಯಲ್ಲಿ ಭಾಗಿಯಾಗಿರುವ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ಮುಂದಾಗಿದೆ.
ಅಧಿಕಾರಿಗಳ ಅಕ್ರಮ ಗಣಿಗಾರಿಕೆಯನ್ನು ಬಯಲಿಗೆ ಎಳೆದಿದ್ದ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು, ಈ ಅಕ್ರಮದಿಂದ ಮೈಸೂರು ಮಿನರಲ್ಸ್(ಎಂಎಂಎಲ್)ಗೆ 642 ಕೋಟಿ ರುಪಾಯಿ ನಷ್ಟ ಉಂಟಾಗಿದೆ ಎಂದು 2008ರಲ್ಲಿ ಸರ್ಕಾರಕ್ಕೆ ವರದಿ ನೀಡಿದ್ದರು. ಆದರೆ ಈ ವರದಿ ಮೇಲೆ ಬಿಜೆಪಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಸಂತೋಷ್ ಹೆಗ್ಡೆ ಅವರ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿತ್ತು.
ಈಗ ಅಧಿಕಾರಿಗಳ ರಕ್ಷಣೆಗೆ ಮುಂದಾಗಿರುವ ಸರ್ಕಾರ ಮೈಸೂರು ಮಿನರಲ್ಸ್‌ನ ಅಕ್ರಮಗಳ ಕುರಿತು ಸಂತೋಷ್ ಹೆಗ್ಡೆ ಅವರು ನೀಡಿದ ವರದಿಯ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದೆ. ಲೋಕಾಯುಕ್ತರು ನಡೆಸಿರುವ ತನಿಖೆಯಲ್ಲಿ ಕೆಲವು ಲೋಪದೋಷಗಳಿದ್ದು, ಹೊಸದಾಗಿ ತನಿಖೆ ನಡೆಸುವಂತೆ ಸೂಚಿಸಿದೆ. ಅಲ್ಲದೆ ಎಂಎಂಎಲ್ ಅಕ್ರಮದಲ್ಲಿ ಕೇವಲ ಅಧಿಕಾರಿಗಳನ್ನು ಹೊಣೆ ಮಾಡಲಾಗದು ಎಂದು ಸರ್ಕಾರ ಪ್ರತಿಪಾದಿಸಿದೆ.
ಎಂಎಂಎಲ್ ಅಕ್ರಮ ಗಣಿಗಾರಿಕೆಯಲ್ಲಿ ಆರು ಅಧಿಕಾರಿಗಳು ಭಾಗಿಯಾಗಿದ್ದು, 1999-2000ರವರೆಗೆ ಎಂಎಂಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿ.ಉಮೇಶ್ ಅವರಿಂದ ಕಂಪನಿಗೆ 6.90 ಕೋಟಿ, 2001-2003ರವರೆಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಐ.ಆರ್.ಪೆರುಮಾಳ್ ಅವರಿಂದ 5.26 ಕೋಟಿ, 2002-2004ರವರೆಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆ.ಎಸ್.ಮಂಜುನಾಥ್‌ರಿಂದ 4.04 ಕೋಟಿ, 2003-2005ರವರೆಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಿ.ಎಸ್.ಅಶ್ವತ್ಥ್ ಅವರಿಂದ 96.23 ಕೋಟಿ, 2004-2007ರವರೆಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜೀಜಾ ಮಹದೇವನ್ ಹರಿಸಿಂಗ್ ಅವರಿಂದ 299.42 ಕೋಟಿ, 2006-2008ರವರೆಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹೇಂದ್ರ ಜೈನ್ ಅವರಿಂದ 219.56 ಕೋಟಿ, 2007-2008ರವರೆಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜಿ.ವಿ.ಕೊಂಗವಾಡ ಅವರಿಂದ 1.36 ಕೋಟಿ ರುಪಾಯಿ ಹಾಗೂ 1999ರಿಂದ 2008ರವರೆಗೆ ಕಂಪನಿಯ ಖಾತೆಯಿಂದ ಒಟ್ಟು 10.75 ಕೋಟಿ ರುಪಾಯಿ ನಷ್ಟ ಸಂಭವಿಸಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿದೆ.
ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ಸಂಪೂರ್ಣ ತನಿಖೆ ನಡೆಸಿ ಡಿಸೆಂಬರ್ 18, 2008ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅಲ್ಲದೆ 642 ಕೋಟಿ ರುಪಾಯಿ ನಷ್ಟ ಉಂಟು ಮಾಡಿರುವ ಈ ಏಳು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದ್ದರು. ಈ ವರದಿಯ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ ಹೊಸದಾಗಿ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಲೋಕಾಯುಕ್ತ ರಿಜಿಸ್ಟಾರ್ ಅವರಿಗೆ ಪತ್ರ ಬರೆದಿದ್ದಾರೆ.
ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸಮರ್ಥಿಸಿಕೊಂಡಿದ್ದು, ಎಂಎಂಎಲ್‌ಗೆ ಸಂಭವಿಸಿರುವ ನಷ್ಟಕ್ಕೆ ಅಧಿಕಾರಿಗಳನ್ನು ಮಾತ್ರ ಹೊಣೆ ಮಾಡಲು ಸಾಧ್ಯವಿಲ್ಲ. ಹೆಚ್ಚುವರಿ ಸಿಬ್ಬಂದಿ, ಅದಿರಿಗೆ ದೊರೆಯದ ಸೂಕ್ತ ಬೆಲೆ ಹಾಗೂ ಉತ್ಪದನಾ ವೆಚ್ಚಗಳು ಸೇರಿದಂತೆ ಹಲವಾರು ಕಾರಣಗಳಿಂದ ಎಂಎಂಎಲ್‌ಗೆ ನಷ್ಟ ಉಂಟಾಗಿದೆ ಎಂದು ಹೇಳಿದೆ.
ಇನ್ನು ಅಧಿಕಾರಿಗಳು ಲೋಕಾಯುಕ್ತ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತನಿಖೆ ಕೈಗೊಳ್ಳುವ ಮುನ್ನ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಲೋಕಾಯುಕ್ತ ಅವಕಾಶವನ್ನೇ ನೀಡಿಲ್ಲ. ಹೀಗಾಗಿ ಲೋಕಾಯುಕ್ತ ವರದಿಯೇ ಕಾನೂನು ಬಾಹಿರ ಎಂದಿದ್ದರು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸಮರ್ಥನೆ ಮತ್ತು ಅಧಿಕಾರಿಗಳ ಅಭಿಪ್ರಾಯಗಳನ್ನು ಪರಿಗಣಿಸಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ಸೂಚಿಸಿದೆ.