ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಕ್ಷದ ಚಿಹ್ನೆ ಪ್ರದರ್ಶಿಸಿದ ಮೋದಿ ವಿರುದ್ಧ ಎಫ್‌ಐಆರ್ ದಾಖಲು

Vishwanath S
Updated On : 30 Apr 2014, 6:34 am

ಅಹಮದಾಬಾದ್: ಮತದಾನ ಬಳಿಕ ಮತಗಟ್ಟೆಯ ಬಳಿ ಬಿಜೆಪಿ ಪಕ್ಷದ ಚಿಹ್ನೆ ಪ್ರದರ್ಶಿಸಿದ ಆರೋಪದ ಮೇಲೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಗುಜರಾತ್ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಗುಜರಾತ್ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚಿಸಿತ್ತು.

ಗುಜರಾತ್‌ನ ಅಹಮದಾಬಾದ್‌ನಲ್ಲಿ ತಮ್ಮ ಹಕ್ಕು ಚಲಾಯಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುವ ವೇಳೆ ಮೋದಿ ಕಮಲದ ಚಿಹ್ನೆಯನ್ನು ಪ್ರದರ್ಶಿಸಿದ್ದರು. ಅಲ್ಲದೆ ಮಾಧ್ಯಮಗಳ ಮುಂದೆ ತಮ್ಮ ಕಮಲದ ಚಿಹ್ನೆಯ ಫೋಟೋವನ್ನ ತಾವೇ ಕ್ಲಿಕ್ಕಿಸಿಕೊಂಡರು. ಇದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಮೋದಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಮೋದಿ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಚುನಾವಣಾ ಆಯೋಗ, ಘಟನೆಗೆ ಸಂಬಂಧಿಸಿದಂತೆ ಅಹಮದಾಬಾದ್ ಜಿಲ್ಲಾಧಿಕಾರಿಯಿಂದ ವರದಿ ತರಿಸಿಕೊಂಡಿದ್ದು, ಈಗ ಮೋದಿ ವಿರುದ್ಧ ಸೆಕ್ಷನ್ 126(1)(ಎ)ಮತ್ತು 126(1)(ಬಿ)ಅಡಿ ಎಫ್‌ಐಆರ್ ದಾಖಲಿಸುವಂತೆ ಗುಜರಾತ್ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗೆ ಸೂಚಿಸಿತ್ತು.

ಮತದಾನದ ವೇಳೆ ಮತಗಟ್ಟೆಗಳ ಬಳಿ ಪಕ್ಷದ ಚಿಹ್ನೆಯನ್ನು ಪ್ರದರ್ಶಿಸುವುದು ಮತ್ತು ಸುದ್ದಿಗೋಷ್ಠಿ ನಡೆಸುವಂತಿಲ್ಲ ಇಂದು ದೇಶಾದ್ಯಂತ ನಡೆಯುತ್ತಿರುವ ಮತದಾನದ ಮೇಲೆ ಪರಿಣಾಮ ಬೀರುತ್ತದೆ. ಚುನಾವಣಾ ಆಯೋಗದ ನೀತಿ ಸಂಹಿತೆ ಪ್ರಕಾರ ಮತದಾನದ ವೇಳೆ ಮತಗಟ್ಟೆಯಿಂದ 100 ಮೀಟರ್ ಒಳಗೆ ಅಭ್ಯರ್ಥಿಗಳು ಪ್ರಚಾರ ಮಾಡುವುದು ನಿಷೇಧ ಎಂದು ಆಯೋಗ ಹೇಳಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement