ಮೋದಿ ಹೇಳಿಕೆಗೆ ಬಗ್ಗುವಷ್ಟು ಪಾಕ್ ದುರ್ಬಲವಲ್ಲ: ಅಲಿಖಾನ್
ಇಸ್ಲಾಮಾಬಾದ್: ಭೂಗತ ದೊರೆ ದಾವೂದ್ ಇಬ್ರಾಹಿಂ ಕುರಿತು ಇತ್ತೀಚೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನೀಡಿದ್ದ ಪ್ರಚೋದನಕಾರಿ ಹೇಳಿಕೆಯನ್ನು ಟೀಕಿಸಿರುವ ಪಾಕಿಸ್ತಾನ, ಒಂದು ವೇಳೆ ಮೋದಿ ದೇಶದ ಪ್ರಧಾನಿಯಾದರೆ ಉಭಯ ದೇಶಗಳ ನಡುವೆ ಆಂತರಿಕ ಅಸ್ಥಿರತೆ ಉಂಟಾಗಲಿದೆ ಎಂದು ಪಾಕಿಸ್ತಾನ ಆಂತರಿಕ ವ್ಯವಹಾರಗಳ ಸಚಿವ ಚೌಧರಿ ನಿಸ್ಸಾರ್ ಅಲಿಖಾನ್ ಹೇಳಿದ್ದಾರೆ.
ಮೋದಿ ಪ್ರಧಾನಿಯಾದರೆ ಪ್ರಾಂತೀಯ ಶಾಂತಿ-ಸೌಹಾರ್ದತೆ ಅಸ್ಥಿರಗೊಳಿಸಲಿದ್ದಾರೆ ಎಂದು ಹೇಳಿರುವ ಅಲಿಖಾನ್, ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದಿಂದ ಹಿಡಿದು ತರುತ್ತೇನೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುವ ಮುನ್ನ ದಾವೂದ್ ಎಲ್ಲಿ ವಾಸ್ತವ್ಯ ಹೂಡಿದ್ದಾನೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ದೇಶದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿರುವ ವ್ಯಕ್ತಿ ಮತ್ತು ಪ್ರಮುಖ ರಾಜಕೀಯ ಪಕ್ಷವೊಂದರ ನಾಯಕರೊಬ್ಬರು ಈ ರೀತಿ ಹೇಳಿಕೆ ನೀಡಿರುವುದು ಪಾಕಿಸ್ತಾನದ ಬಗ್ಗೆ ಅವರಿಗಿರುವ ದ್ವೇಷ ಮತ್ತು ಸೇಡಿನ ಭಾವನೆಗಳನ್ನು ತೋರಿಸುತ್ತದೆ ಎಂದರು.
ದಾವೂದ್‌ಗೆ ಆಶ್ರಯ ನೀಡಿರುವ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲಾಗುವುದು ಎಂಬಂತಹ ಮೋದಿ ಹೇಳಿಕೆಗಳಿಗೆ ಬಗ್ಗುವಷ್ಟು ಪಾಕಿಸ್ತಾನ ದುರ್ಬಲವಾಗಿಲ್ಲ ಎಂದು ಅಲಿಖಾನ್ ಹೇಳಿದ್ದಾರೆ.