ರಾಸಲೀಲೆ ಪ್ರಕರಣ: ದೇವಿಶ್ರೀಗೆ ಷರತ್ತುಬದ್ಧ ಜಾಮೀನು
ರಾಸಲೀಲೆ ಪ್ರಕರಣದ ಆರೋಪಿ ಜ್ಯೋತಿಷಿ ರಾಮಸ್ವಾಮಿ ದೇವಿಶ್ರೀಯನ್ನು ನಿನ್ನೆ...
ಬೆಂಗಳೂರು: ರಾಸಲೀಲೆ ಪ್ರಕರಣದ ಆರೋಪಿ ಜ್ಯೋತಿಷಿ ರಾಮಸ್ವಾಮಿ ದೇವಿಶ್ರೀಗೆ ಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ದೇವಿಶ್ರೀಯನ್ನು ನಿನ್ನೆ ತಮಿಳುನಾಡಿನ ಧರ್ಮಪುರಿಯಲ್ಲಿ ಬಂಧಿಸಿದ್ದ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಇಂದು ಆರೋಪಿಯನ್ನು ನಗರಕ್ಕೆ ಕರೆತಂದು 6ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿದೆ.
ಪೊಲೀಸರು ದೇವಿಶ್ರೀಯನ್ನು ಕೋರ್ಟ್‌ಗೆ ಹಾಜರು ಪಡಿಸುವ ಮುನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಬಳಿಕ ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದರು.
ತನ್ನ ಜ್ಯೋತಿಷ್ಯಾಲಯದ ಉದ್ಯೋಗಿಯೊಂದಿಗಿನ ರಾಸಲೀಲೆ ವಿಡಿಯೋ ಬಹಿರಂಗವಾದ ಬಳಿಕ ದೇವಿಶ್ರೀ ನಾಪತ್ತೆಯಾಗಿದ್ದ. ಅವರ ಮೊಬೈಲ್ ನೆಟ್‌ವರ್ಕ್ ಭೇದಿಸಿ ಮಂಗಳವಾರ ರಾತ್ರಿ ತಮಿಳುನಾಡಿನ ಧರ್ಮಪುರಿಯಲ್ಲಿ ಬಂಧಿಸಲು ಪೊಲೀಸರು ಸಫಲರಾಗಿದ್ದರು.
ಆಶ್ರಮ ಕಚೇರಿ ಮಹಿಳಾ ಸಿಬ್ಬಂದಿ ಜತೆ ಕಾಮಲೀಲೆ ನಡೆಸಿದ ದೇವಿಶ್ರೀ ವಿರುದ್ಧ ಎಚ್‌ಎಸ್‌ಆರ್ ಬಡಾವಣೆ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿತ್ತು.
ದೇವಿಶ್ರೀಯ ಕಾರು ಚಾಲಕರಾಗಿದ್ದ ವಸಂತ್ ಹಾಗೂ ಉದಯ್ ದೂರು ನೀಡಿದ್ದರು. ತನ್ನ ವಿರುದ್ಧದ ವಿಡಿಯೋವನ್ನು ಬಿಡುಗಡೆ ಮಾಡಿದರೆ ಕೊಲೆ ಮಾಡಿಸುವುದಾಗಿ ದೇವಿಶ್ರೀ ಬೆದರಿಕೆಯೊಡ್ಡಿದ್ದ ಎಂದು ದೂರಿನಲ್ಲಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 506 ಅನ್ವಯ ದೇವಿಶ್ರೀ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕಳೆದ ಏ.26ರಂದು ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರವಾದ ಬಳಿಕ ದೇವಿಶ್ರೀ ತಲೆಮರೆಸಿಕೊಂಡಿದ್ದರು.