ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಸ್- ಕಾರು ಡಿಕ್ಕಿ: ಮೂವರ ಸಾವು

Vishwanath S
Updated On : 1 May 2014, 2:29 am

ಗುಲ್ಬರ್ಗ: ನಗರ ಹೊರವಲಯದ ಗುಲ್ಬರ್ಗ- ಅಫಜಲ್ಪುರ ರಸ್ತೆಯ ಹೈಕೋರ್ಟ್ ಹತ್ತಿರ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಸಾರಿಗೆ ಬಸ್ ಮತ್ತು ಇಂಡಿಕಾ ಕಾರು ನಡುವೆ ಡಿಕ್ಕಿ ಸಂಭವಿಸಿ ದಂಪತಿ ಸೇರಿ ಮೂವರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಎನ್‌ಜಿಒ ಕಾಲೋನಿಯ ಜಗದೀಶ್ ಜಾನೆ(70) ಮತ್ತು ಅವರ ಪತ್ನಿ ನೀಲಾವತಿ ಜಾನೆ(22) ಹಾಗೂ ಪೂರ್ಣಿಮಾ ಬಾಬಜಿ(18) ಮೃತರು. ಜಗದೇಶ ಸ್ಥಳದಲ್ಲಿಯೇ ಮೃತಪಟ್ಟರೆ ನೀಲಾವತಿ ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ, ಪೂರ್ಣಿಮಾ ಚಿಕಿತ್ಸೆ ಫಲಕಾರಿಯಾಗದೆ ಬಸವೇಶ್ವರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಿಂಬೆಮ್ಮ ನಂದನಗೌಡ ಪಾಟೀಲ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಟಾಟಾ ಇಂಡಿಕಾ ಕಾರಿನಲ್ಲಿ ಗುಲ್ಬರ್ಗದಿಂದ ಮುನ್ನಳ್ಳಿ ಜಾತ್ರೆಗೆ ಹೋಗುತ್ತಿದ್ದಾಗ ಬಸ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬಸ್ ಚಾಲಕ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಡಿ.ಸಿ ರಾಜಣ್ಣ, ಪಿಎಸ್‌ಐ ಹರಿಬಾ ಜಮಾದಾರ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಲಾರಿ ಡಿಕ್ಕಿ: ಸವಾರ ಸಾವು
ಚಿತ್ತಾಪುರ: ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ಲಾರಿ ಹಾಗೂ ದ್ವಿಚಕ್ರ ವಾಹನ ಮಧ್ಯೆ ಬುಧವಾರ ಮಧ್ಯಾಹ್ನ  ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರವೀಣ ಭಾನುಸಾಲಿ(48)ಮೃತ ದುರ್ದೈವಿ. ಈತ ಗುಜರಾತ ಮೂಲದವನಾಗಿದ್ದು, ಗುಲ್ಬರ್ಗದ ವಕೀಲರ ಕಾಲೋನಿಯಲ್ಲಿ ವಾಸಿಸುತ್ತಿದ್ದ ಎಂದು ಹೇಳಲಾಗಿದೆ. ಕಲ್ಲು(ಫರಸಿ) ವ್ಯಾಪಾರ ಮಾಡುತ್ತಿದ್ದು, ಚಿತ್ತಾಪುರದಲ್ಲಿ ಫರಸಿ ಖರೀದಿ ಮಾಡಿ ಅದರ ಹಣ ಕೊಡಲು ಬಂದಿದ್ದ. ಹಣ ಕೊಟ್ಟು ವಾಪಸ್ಸು ಗುಲ್ಬರ್ಗಕ್ಕೆ ಹೋಗುವಾಗ ಲಾಡ್ಜಿಂಗ್ ಕ್ರಾಸ್ ಬಳಿ ತಾಂಡೂರನಿಂದ ವಾಡಿಗೆ ಹೊರಟಿದ್ದ ಲಾರಿ ಗುದ್ದಿದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಿಪಿಐ ಶಂಕರಗೌಡ ಪಾಟೀಲ್, ಪಿಎಸ್‌ಐ ಸಂಜೀವಕುಮಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಅಪಹರಣ
ಅಫಜಲ್ಪರ: ತಾಲೂಕಿನ ಅಳ್ಳಗಿ(ಬಿ) ಗ್ರಾಮದ ಪರಶುರಾಮ ಚಂದಣ್ಣ ತೆಗ್ಗೆಳ್ಳಿ(25) ಎಂಬಾತನು ಅದೇ ಗ್ರಾಮದ ಸಂಗೀತಾ ಹೇರೂರ(21) ಎಂಬ ಯುವತಿಯನ್ನು ಏ.24ರಂದು ಅಪಹರಿಸಿದ್ದಾನೆಂದು ಯುವತಿಯ ತಾಯಿ ಶ್ರೀಮಂತಬಾಯಿ ಶಂಕರ ಹೇರೂರ ಅಫಜಲ್ಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್‌ಐ ಬೆಂಡೆಗುಂಬಳ ಆರೋಪಿಯ ಹುಡುಕಾಟಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರವಚನ ಇಂದಿನಿಂದ
ಚಿತ್ತಾಪುರ:ತಾಲೂಕಿನ ಅಲ್ಲೂರ (ಬಿ) ಗ್ರಾಮದ ಅಂಗಳ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವ ಜಯಂತಿ ನಿಮಿತ್ತ ಮೇ 1 ಹಾಗೂ 2ರಂದು ರಾತ್ರಿ 8 ರಿಂದ 10ಗಂಟೆವರೆಗೆ ಪ್ರವಚನ ನಡೆಯಲಿದೆ. ಬೀದರ್ ಜಿಲ್ಲೆಯ ಚಟ್ನಳ್ಳಿಯ ಅಲ್ಲಂಪ್ರಭು ಮಠದ ಪೀಠಾಧಿಪತಿ ಸಿದ್ಧೇಶ್ವರಾನಂದ ಸ್ವಾಮೀಜಿ ಬಸವಣ್ಣನವರ ಬಗ್ಗೆ  ಪ್ರವಚನ ನೀಡಲಿದ್ದಾರೆ ಎಂದು ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಅಯ್ಯಣ್ಣ ಅವಂಟಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement