ಬೇಡಿಕೆಗೆ ಸ್ಪಂದನೆ: ಕಾರ್ಖಾನೆ ಕಾರ್ಮಿಕರ ಧರಣಿ ಹಿಂದಕ್ಕೆ
ಆಳಂದ: ತಾಲೂಕಿನ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಡೆಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಅಂತ್ಯವಾಯಿತು.
ಬೇಡಿಕೆ ಈಡೇರಿಸುವ ಕುರಿತು ಎನ್‌ಎಸ್‌ಎಲ್ ಶುಗರ್ಸ್ ಕಾರ್ಖಾನೆಯ ಆಡಳಿತ ಮಂಡಳಿಯೂ ಸ್ಪಂದಿಸಿದ ಹಿನ್ನೆಲೆಯಲ್ಲಿ ಕಾರ್ಮಿಕ ಮುಖಂಡರು ತಮ್ಮ ಸತ್ಯಾಗ್ರಹ ಹಿಂದಕ್ಕೆ ಪಡೆದುಕೊಂಡರು.
ಕಾರ್ಮಿಕರು ತಮ್ಮ 6 ಮೂಲಭೂತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಟ್ಟುಹಿಡಿದಿದ್ದರು. ಕೊನೆಗೂ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕಾರ್ಖಾನೆ ಉಪಾಧ್ಯಕ್ಷ ರಾಮಮೂರ್ತಿ ಎಂ. ಅವರು ಶೇ.25 ವೇತನ ಪೈಕಿ ಶೇ.18ರಷ್ಟು ನೀಡಲಾಗುವುದು. ಹೆಚ್ಚಿನ ಕೆಲಸಕ್ಕೆ ದ್ವಿಗುಣ ವೇತನ ಪಾವತಿ ನೀಡಲಾಗುವುದು. ಈ ಎರಡು ಬೇಡಿಕೆಗೆ ಸದ್ಯಕ್ಕೆ ಈಡೇರಿಸಿ ಉಳಿದ ನಾಲ್ಕು ಬೇಡಿಕೆಯನ್ನು ಮುಂದಿನ ಹಂಗಾಮಿನಲ್ಲಿ ಪೂರೈಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಕಾರ್ಮಿಕ ಮುಖಂಡರು ಹೇಳಿದ್ದಾರೆ.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಧರ್ಮರಾಜ ಸಾಹು, ಕಲ್ಯಾಣರಾವ್ ಪಾಟೀಲ್, ಮಾನವ ಹಕ್ಕುಗಳ ವ್ಯವಸ್ಥಾಪಕ ರಮೇಶ ಬೆಲ್ಲಾಪುರೆ ನಡುವೆ ಮಾತುಕತೆ ನಡೆದು ಕಾರ್ಮಿಕರ 6 ಬೇಡಿಕೆಯಲ್ಲಿ ಎರಡನ್ನು ಈಡೇರಿಸಲು ನಿರ್ಧರಿಸಲಾಯಿತು.
ಆಡಳಿತ ಮಂಡಳಿ ಪರ ಉಪಾಧ್ಯಕ್ಷ ರಾಮಮೂರ್ತಿ, ಮಾನವ ಹಕ್ಕುಗಳ ವಿಭಾಗದ ವ್ಯವಸ್ಥಾಪಕ ರಮೇಶ ಬೆಲ್ಲಾಪುರೆ, ಆಡಳಿತ ವ್ಯವಸ್ಥಾಪಕ ರಾಜಸಿಂಗ್, ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ವಿಶ್ವನಾಥ ಮೇಲಕುಡ್ ಹಾಗೂ ರೈತ ಮುಖಂಡರ ಪರವಾಗಿ ಕಬ್ಬು ಬೆಳೆಗಾರ ಅಧ್ಯಕ್ಷ ಧರ್ಮರಾಜ ಸಾಹು, ಕಲ್ಯಾಣರಾವ್ ಪಾಟೀಲ್ ಭೂಸನೂರ, ಪ್ರಶಾಂತ ಪಾಟೀಲ್ ಕೊರಳ್ಳಿ, ಶಾಂತಮಲ್ಲಪ್ಪ ನೆಲ್ಲೂರ ಆಗಮಿಸಿದ್ದರು.
ಕಾರ್ಮಿಕರ ಸಂಘದ ಅಧ್ಯಕ್ಷ ಕೃಷ್ಣಾ ಟಿಕೋಳೆ, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಚಕ್ರಪಾಣಿ, ಉಪಾಧ್ಯಕ್ಷ ಸಿದ್ದರಾಮ ಶಿರೋಳ, ರಾಜೇಂದ್ರ ವರ್ಧಮಾನ, ಮಲ್ಲಪ್ಪ ಬುಜುರ್ಕೆ, ವೀರಭದ್ರಪ್ಪ ಕಂಬಾರ, ಬಸವರಾಜ ಗವಿ, ಶರಣಬಸಪ್ಪ ಕಲಶೆಟ್ಟಿ, ಶಿವಶರಣಪ್ಪ ಕಂಬಾರ, ರೆವಣಸಿದ್ದಪ್ಪ ಮಾನಳೆ, ಮಾದೇವ ನರೋಣಾ ಪಾಲ್ಗೊಂಡಿದ್ದರು.