ಆರೋಪ ಸಾಬೀತಾದರೆ ಗಲ್ಲಿಗೇರಲು ಸಿದ್ಧ: ನ್ಯಾಯಾಧೀಶ
ಗ್ವಾಲಿಯರ್: ನ್ಯಾಯಾಧೀಶೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಿಲುಕಿರುವ ಮಧ್ಯಪ್ರದೇಶದ ಹೈಕೋರ್ಟ್ನ ನ್ಯಾಯಾಧೀಶರು 'ಆರೋಪ ಸಾಬೀತಾದರೆ ಮರಣದಂಡನೆಗೆ ಸಿದ್ಧ' ಎಂದು ಸೋಮವಾರ ಹೇಳಿದ್ದಾರೆ.
ಈ ಸಂಬಂಧ ಮಧ್ಯಪ್ರದೇಶದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿರುವ ಅಪಾಧಿತ ನ್ಯಾಯಾಧೀಶರು, ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಕೋರಿದ್ದು, ಪ್ರಕರಣದ ತನಿಖೆಗೆ ಸಮಿತಿಯೊಂದನ್ನು ರಚಿಸಿ, ಆ ಸಮಿತಿಯ ವಿಚಾರಣೆ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಗ್ವಾಲಿಯರ್ ಹೆಚ್ಚುವರಿ ನ್ಯಾಯಾಧೀಶೆಯೊಬ್ಬರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಹೈಕೋರ್ಟ್ ನ್ಯಾಯಾಧೀಶರು ತಮಗೆ ಐಟಂ ಹಾಡಿಗೆ ಡ್ಯಾನ್ಸ್ ಮಾಡುವಂತೆ ಸೂಚಿಸಿದ್ದರು ಮತ್ತು ಡ್ಯಾನ್ಸ್ ಮಾಡದಿದ್ದರಿಂದ ತಮ್ಮನ್ನು ಬೆರೆ ಕಡೆ ವರ್ಗಾವಣೆ ಮಾಡಿಸಲು ಪ್ರಭಾವ ಬೀರಿದ್ದಾರೆ ಎಂದು ಮಹಿಳಾ ನ್ಯಾಯಾಧೀಶೆ, ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮತ್ತು ಕೇಂದ್ರ ಕಾನೂನು ಸಚಿವರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ.
ಹೆಚ್ಚುವರಿ ನ್ಯಾಯಾಧೀಶೆ ಜುಲೈ 15ರಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಹೈಕೋರ್ಟ್ ನ್ಯಾಯಾಧೀಶರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಗಸ್ಟ್ 1ರಂದು ರಾಷ್ಟ್ರಪತಿಗಳಿಗೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಮತ್ತು ಕಾನೂನು ಸಚಿವರಿಗೆ ಪತ್ರ ಬರೆದಿದ್ದರು.