ಕೊಳವೆ ಬಾವಿ ದುರಂತ: ಕಾರ್ಯಾಚರಣೆಗೆ ಮಳೆ ಅಡ್ಡಿ
ಕೊಳವೆ ಬಾವಿಗೆ ಬಿದ್ದರುವ ಆರು ವರ್ಷದ ತಿಮ್ಮಣ್ಣನ ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿ ಮಾಡಿದೆ. ಮಳೆಯ ನಡುವೆಯು ರಕ್ಷಣಾ ಸಿಬ್ಬಂದಿ ರಕ್ಷಣಾ...
ಬೆಂಗಳೂರು: ಕೊಳವೆ ಬಾವಿಗೆ ಬಿದ್ದರುವ ಆರು ವರ್ಷದ ತಿಮ್ಮಣ್ಣನ ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿ ಮಾಡಿದೆ. ಮಳೆಯ ನಡುವೆಯು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ಕಾರ್ಯಾಚರಣೆ ವೇಳೆ ಘಟನಾ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಪಿಡಿಒ ಅಧಿಕಾರಿ ವಿರುದ್ಧ ಕ್ರಿಮಿನಲ್ ಕೇಸ್
ರಾಜ್ಯದಲ್ಲಿ ಕೊಳವೆ ಬಾವಿ ದುರಂತಗಳು ಸಂಭವಿಸುತ್ತಿದ್ದರು ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಅಲ್ಲದೆ ಸೂಳೀಕೆರಿ ಕೊಳವೆ ಬಾವಿ ದುರಂತಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಪಿಡಿಓ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಲು ಉತ್ತರವಲಯ ಐಜಿಪಿ ಭಾಸ್ಕರ್ರಾವ್ ಕೇರೂರು ಠಾಣಾ ಪೊಲೀಸರಿಗೆ ಸೂಚಿಸಿದ್ದಾರೆ.
ನಿನ್ನೆ ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲೂಕಿನ ಸೂಳೀಕೆರಿ ಗ್ರಾಮದಲ್ಲಿ 6 ವರ್ಷದ ಬಾಲಕ ಕೊಳವೆ ಬಾವಿ ಬಿದ್ದ ಪ್ರಕರಣ ಸಂಬಂಧ ಸೂಳೀಕೆರಿ ಎಇಇ ಶೆಟ್ಟಿ ಮತ್ತು ಪಿಡಿಒ ಶೌಖತ್ ಅಲಿ ಮುರ್ನಾಳ್ ಅವರನ್ನು ಸರ್ಕಾರ ಅಮಾನತು ಮಾಡಿದೆ. ಅಲ್ಲದೆ ಕೊಳವೆ ಬಾವಿ ದುರಂತಗಳನ್ನು ತಡೆಯುವ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊಸ ಮಾರ್ಗಸೂಚಿಗಳನ್ನು ರಚನೆ ಮಾಡಿದೆ.
ಪರಿಷ್ಕೃತ ಮಾರ್ಗಸೂಚಿಗಳು
1. ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಬೋರವೆಲ್ಗಳ ಸರ್ವೆಗೆ ಆದೇಶ
2. 10 ದಿನದಲ್ಲಿ ಎಲ್ಲಾ ನಿರುಪಯುಕ್ತ ಕೊಳವೆ ಬಾವಿಗಳ ಮುಚ್ಚಲು ಆದೇಶ
3 ಖಾಸಗಿ ಕೊಳವೆ ಬಾವಿ ಮುಚ್ಚಿಸದಿದ್ದರೆ ಮಾಲೀಕ ಹಾಗೂ ಬಾವಿ ಕೊರೆದ ಕಂಪನಿಯ ವಿರುದ್ಧ ಕೇಸ್ ದಾಖಲು
4. ಖಾಸಗಿ ಕೊಳವೆ ಬಾವಿ ಕೊರೆಯುವ ಮುನ್ನ ಸ್ಥಳೀಯ ಅಧಿಕಾರಿಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು
ಎರಡನೇ ಬಾರಿ ರೋಬೋ ಕಾರ್ಯಾಚರಣೆ ಸ್ಥಗಿತ
ಬಾಲಕನ ರಕ್ಷಣೆಗಾಗಿ ಮಂಡ್ಯದಿಂದ ರೈತ ಮಂಜೇಗೌಡ ತಂದಿರುವ ರೋಬೋ ಕಾರ್ಯಾಚರಣೆಯನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ. ರೋಬೋ ಕಾರ್ಯಾಚರಣೆಗೆ ಆಮ್ಲಜನಕ ಪೈಪ್ ಅಡ್ಡಿಬಂದ ಹಿನ್ನೆಲೆಯಲ್ಲಿ ಈ ಬಾರಿ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಈ ಮುಂಚೆ ತಾಂತ್ರಿಕ ತೊಂದರೆಯಿಂದ 120 ಅಡಿ ಆಳಕ್ಕೆ ಇಳಿದಿದ್ದ ರೋಬೋವನ್ನು ಹೊರ ತೆಗೆಯಲಾಗಿತ್ತು.
ನಿನ್ನೆ 6 ವರ್ಷದ ತಿಮ್ಮಣ್ಣ ಹನುಮಂತ ಹಟ್ಟಿ, ಅವನ ಕುಟುಂಬಕ್ಕೇ ಸೇರಿದ ಹೊಲದಲ್ಲಿದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ದೊಡ್ಡಪ್ಪನ ಮಗನಿಗೆ ಕಬ್ಬಿನ ಗದ್ದೆ ತೋರಿಸಲು ಹೋಗಿದ್ದ ತಿಮ್ಮಣ್ಣ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದ್ದು, ಸುಮಾರು 160 ಅಡಿ ಆಳದಲ್ಲಿ ಸಿಲುಕಿದ್ದಾನೆ ಎಂದು ಶಂಕಿಸಲಾಗಿದೆ. ಬಾದಾಮಿ ತಾಲೂಕಿನ ಸೂಳೀಕೇರಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ದುರ್ಘಟನೆ ನಡೆದಿದೆ.