ಪಶುಪತಿನಾಥನ ಸಂಪೂರ್ಣ ಅನುಗ್ರಹ ಪಡೆದ ಅನುಭವ: ಮೋದಿ
ಕಠ್ಮಂಡು: ಎರಡು ದಿನಗಳ ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಶ್ವ ಪ್ರಸಿದ್ಧ ಹಿಂದು ದೇವಸ್ಥಾನ ಪಶುಪತಿನಾಥಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ಇದೇ ವೇಳೆ, ಪಶುಪತಿನಾಥ ದೇವಸ್ಥಾನದಲ್ಲಿ ಧರ್ಮಶಾಲಾವನ್ನು ನಿರ್ಮಿಸುವಂತೆ 25 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಲ್ಲದೇ ದೇವಸ್ಥಾನಕ್ಕೆ 2500 ಕೆಜಿ ಶ್ರೀಗಂಧವನ್ನು ನೀಡಿದ್ದಾರೆ.
ಕೇಸರಿ ಬಣ್ಣದ ಕುರ್ತಾ-ಪೈಜಾಮಾದಲ್ಲಿ ಕಂಗ್ಗೊಳೆಸುತ್ತಿದ್ದ ಪ್ರಧಾನಿ ಮೋದಿ ಅವರು ಪಶುಪತಿನಾಥನಲ್ಲಿ ಪ್ರಾರ್ಥನೆ ಸಲ್ಲಿಸಿ ಆ ನಂತರ ನೇಪಾಳ ಅಧ್ಯಕ್ಷ ರಾಮ್ ಬರನ್ ಯಾದವ್ ಅವರನ್ನು ಭೇಟಿಯಾದರು.
ಪಶುಪತಿನಾಥನಿಗೆ ಪೂಜೆ ಸಲ್ಲಿಸಿದ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪಶುಪತಿನಾಥನ ಮುಂದೆ ನಿಂತಾಗ ದೇವರ ಸಂಪೂರ್ಣ ಅನುಗ್ರಹ ಪಡೆದ ಅನುಭವವಾಯಿತು ಎಂದರು.
17 ವರ್ಷಗಳ ನಂತರ ನೇಪಾಳಕ್ಕೆ ಪ್ರಸ್ತುತ ಭೇಟಿ ನೀಡಿರುವ ನರೇಂದ್ರ ಮೋದಿ ಅವರು ಮೊದಲ ಪ್ರಧಾನಿಯಾಗಿದ್ದಾರೆ.
ಹಿಂದುಗಳ ಅತಿ ಪವಿತ್ರ ಶಿವನ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಶುಪತಿನಾಥ ದೇವಸ್ಥಾನ ಕ್ರಿ.ಶ 400ರಲ್ಲಿ ನಿರ್ಮಾಣವಾಗಿದ್ದು, ಪ್ರತಿನಿತ್ಯ ವಿಶ್ವದೆಲ್ಲೆಡೆಗಳಿಂದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.