ಹೈಕೋರ್ಟ್ ನ್ಯಾಯಾಧೀಶ ರಿಂದ ಲೈಂಗಿಕ ಕಿರುಕುಳ: ಕಿರಿಯ ನ್ಯಾಯಾಧೀಶೆ ರಾಜಿನಾಮೆ
ಮಧ್ಯಪ್ರದೇಶ ಹೈಕೋರ್ಟ್...
ನವದೆಹಲಿ: ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಗ್ವಾಲಿಯರ್ ಹೆಚ್ಚುವರಿ ನ್ಯಾಯಾಧೀಶೆಯೊಬ್ಬರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಹೈಕೋರ್ಟ್ ನ್ಯಾಯಾಧೀಶರು ತಮಗೆ ಐಟಂ ಹಾಡಿಗೆ ಡ್ಯಾನ್ಸ್ ಮಾಡುವಂತೆ ಸೂಚಿಸಿದ್ದರು ಮತ್ತು ಡ್ಯಾನ್ಸ್ ಮಾಡದಿದ್ದರಿಂದ ತಮ್ಮನ್ನು ಬೆರೆ ಕಡೆ ವರ್ಗಾವಣೆ ಮಾಡಿಸಲು ಪ್ರಭಾವ ಬೀರಿದ್ದಾರೆ ಎಂದು ಮಹಿಳಾ ನ್ಯಾಯಾಧೀಶೆ, ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮತ್ತು ಕೇಂದ್ರ ಕಾನೂನು ಸಚಿವರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ.
ಸೋಮವಾರ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರ್ಎಂ ಲೋಧಾ ಅವರು, ಅಧಿಕೃತವಾಗಿ ಇನ್ನೂ ಯಾವುದೇ ದೂರು ನಾನು ಸ್ವೀಕರಿಸಿಲ್ಲ. ಒಂದು ವೇಳೆ ದೂರು ಬಂದರೆ, ಆ ಬಗ್ಗೆ ವರದಿ ನೀಡುವಂತೆ ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸೂಚಿಸಲಾಗುವುದು ಮತ್ತು ವರದಿಯನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಹೆಚ್ಚುವರಿ ನ್ಯಾಯಾಧೀಶೆ ಜುಲೈ 15ರಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಹೈಕೋರ್ಟ್ ನ್ಯಾಯಾಧೀಶರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಗಸ್ಟ್ 1ರಂದು ರಾಷ್ಟ್ರಪತಿಗಳಿಗೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಮತ್ತು ಕಾನೂನು ಸಚಿವರಿಗೆ ಪತ್ರ ಬರೆದಿದ್ದಾರೆ.