ಜಡೇಜಾ-ಆ್ಯಂಡರ್ಸನ್ ಪ್ರಕರಣದ ತೀರ್ಪಿನ ಪುನರ್‌ಪರಿಶೀಲನೆ ಇಲ್ಲ: ಐಸಿಸಿ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರ ರವೀಂದ್ರ ಜಡೇಜಾ ಹಾಗೂ ಇಂಗ್ಲೆಂಡ್ ತಂಡ ಆಟಗಾರ ಆ್ಯಂಡರ್ಸನ್ ನಡುವಿನ ವಾಗ್ವಾದ ಪ್ರಕರಣಕ್ಕೆ ಸಂಬಂಧ ಆ್ಯಂಡರ್ಸನ್‌ಗೆ ನೀಡಿದ್ದ ಕ್ಲೀನ್‌ಚಿಟ್‌ನ್ನು ಐಸಿಸಿ ಸಮರ್ಥಿಸಿಕೊಂಡಿದೆ.
ಟ್ರೆಂಟ್ ಬ್ರಿಡ್ಜ್ ಅಂಗಳದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ವೇಳೆ ನಡೆದ ರವೀಂದ್ರ ಜಡೇಜಾ ಮತ್ತು ಜೇಮ್ಸ್ ಆ್ಯಂಡರ್ಸನ್ ನಡುವಣ ವಾಗ್ವಾದ ನಡೆದಿತ್ತು. ಈ ಪ್ರಕರಣ ಸಂಬಂಧ ಈಗಾಗಲೇ ತೀರ್ಪು ನೀಡಲಾಗಿದ್ದು, ಆ ತೀರ್ಪುನ್ನು ಪರಿಶೀಲಿಸುವುದಿಲ್ಲ ಎಂದು ಐಸಿಸಿ ಹೇಳಿದೆ.
ಪ್ರಕರಣದಲ್ಲಿ ಇಂಗ್ಲೆಂಡ್ ಪರ ಆಟಗಾರ ಆ್ಯಂಡರ್ಸನ್‌ಗೆ ಐಸಿಸಿ ಕ್ಲೀನ್‌ಚಿಟ್ ನೀಡಿತ್ತು. ಇದನ್ನು ವಿರೋಧಿಸಿದ್ದ ಬಿಸಿಸಿಐ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಐಸಿಸಿಗೆ ಆಗ್ರಹಿಸಿತ್ತು.
ಮೊದಲ ಟೆಸ್ಟ್ ಪಂದ್ಯ ಭೋಜನ ವಿರಾಮದ ವೇಳೆ ನಡೆದ ಜಡೇಜಾ-ಆ್ಯಂಡರ್ಸನ್ ವಾಗ್ವಾದ ಪ್ರಕರಣದಲ್ಲಿ ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಭಾರತದ ಆಲ್‌ರೌಂಡರ್ ವಿರುದ್ಧ ಮೊದಲ ಹಂತದ ನಿಯಮ ಉಲ್ಲಂಘನೆ ಮಾಡಿರುವುದಾಗಿ ದೂರು ದಾಖಲಿಸಿತ್ತು.
ಇದೇ ವೇಳೆ ಜಡೇಜಾ ಅವರನ್ನು ತಳ್ಳಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಹಿನ್ನೆಲೆಯಲ್ಲಿ ಭಾರತ ತಂಡ ಆ್ಯಂಡರ್ಸನ್ ವಿರುದ್ಧ 3ನೇ ಹಂತದ ನಿಯಮ ಉಲ್ಲಂಘನೆಯ ದೂರು ದಾಖಲಿಸಿತ್ತು.