ಜನಾರ್ದನ ರೆಡ್ಡಿಗೆ ಸಿಕ್ತು ಜಾಮೀನು, ಆದರೆ ಬಿಡುಗಡೆ ಭಾಗ್ಯವಿಲ್ಲ
ಎಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ಸಿಕ್ಕರು ಬಿಡುಗಡೆ ಭಾಗ್ಯ ಲಭಿಸಿಲ್ಲ.
ಬೆಂಗಳೂರು: ಎಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ಸಿಕ್ಕರು ಬಿಡುಗಡೆ ಭಾಗ್ಯ ಲಭಿಸಿಲ್ಲ.
ಅಸೋಸಿಯೇಟೆಡ್ ಮೈನಿಂಗ್ ಕಂಪನಿ(ಎಎಂಸಿ)ಯ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಜೈಲು ಸೇರಿರುವ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆದರೆ ರೆಡ್ಡಿ ವಿರುದ್ಧ 5 ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಒಂದು ಪ್ರಕರಣ ಸಂಬಂಧ ಜಾಮೀನು ಸಿಕ್ಕಿರುವುದರಿಂದ ರೆಡ್ಡಿಗೆ ಜಾಮೀನು ಸಿಕ್ಕರು ಬಿಡುಗಡೆ ಭಾಗ್ಯವಿಲ್ಲ.
10 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಮೇರೆಗೆ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು ಮಾಡಿರುವ ಕೋರ್ಟ್ ಪ್ರಕರಣದ ಸಾಕ್ಷ್ಯ ನಾಶಪಡಿಸದಂತೆ ಷರತ್ತು ವಿಧಿಸಿದೆ. ಅಲ್ಲದೆ ಪ್ರಕರಣದ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದೆ.
ಪ್ರಕರಣ ಸಂಬಂಧ ಕಳೆದ ಎರಡುವರೆ ವರ್ಷಗಳಿಂದ ಸೆರೆಮನೆ ವಾಸದಲ್ಲಿರುವ ಜನಾರ್ದನ ರೆಡ್ಡಿಗೆ ಪ್ರಕರಣ ಸಂಬಂಧ ಸಿಕ್ಕ ಮೊದಲ ಜಾಮೀನು ಇದಾಗಿದೆ.
ಒಟ್ಟಾರೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದರೂ ಚಂಚಲಗುಡ ಜೈಲು ಬಾಗಿಲು ರೆಡ್ಡಿಗಾಗಿ ಸದಾ ತೆರೆದಿರುತ್ತದೆ. ಜಾಮೀನು ಪಡೆದರೂ ಜೈಲಿನಲ್ಲೇ ಉಳಿಯಬೇಕಾ ಪರಿಸ್ಥಿತಿ ರೆಡ್ಡಿ ಅವರದ್ದಾಗಿದೆ.