ಬೇನಿವಾಲ್ ವಜಾ ಸಮರ್ಥಿಸಿಕೊಂಡ ಸರ್ಕಾರ, ವಿವರಣೆಗೆ ಕಾಂಗ್ರೆಸ್ ಒತ್ತಾಯ
ಮಿಜೋರಾಮ್ ರಾಜ್ಯಪಾಲೆ ಕಮಲಾ ಬೇನಿವಾಲ್ ಅವರನ್ನು...
ನವದೆಹಲಿ: ಮಿಜೋರಾಮ್ ರಾಜ್ಯಪಾಲೆ ಕಮಲಾ ಬೇನಿವಾಲ್ ಅವರನ್ನು ವಜಾಗೊಳಿಸಿರುವ ತನ್ನ ಕ್ರಮವನ್ನು ಕೇಂದ್ರ ಸರ್ಕಾರ ಗುರುವಾರ ಸಮರ್ಥಿಸಿಕೊಂಡಿದೆ. ಅದರೆ ವಜಾ ಮಾಡಿರುವ ಬಗ್ಗೆ ವಿವರಣೆ ನೀಡುವಂತೆ ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ.
ಕಮಲಾ ಬೇನಿವಾಲ್ ವಜಾಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್, ಇದು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಅಷ್ಟೇ ಅಲ್ಲ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ. ಅಲ್ಲದೆ ಬೇನಿವಾಲ್ ವಜಾಕ್ಕೆ ಸ್ಪಷ್ಟವಾದ ಕಾರಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಬೇನಿವಾಲ್ ವಜಾಗೊಳಿಸಿರುವದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಮತ್ತು ಸಂವಿಧಾನದ ಪ್ರಕಾರವೆ ಅವರನ್ನು ವಜಾಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿದ್ದಾರೆ.