ಕೊಳವೆಬಾವಿ ದುರಂತ: ಸರ್ಕಾರಕ್ಕೆ ಹೈಕೋರ್ಟ್ ತುರ್ತು ನೋಟಿಸ್
ತೆರೆದ ಕೊಳವೆ ಬಾವಿಗಳಿಂದ...
ಬೆಂಗಳೂರು: ತೆರೆದ ಕೊಳವೆ ಬಾವಿಗಳಿಂದ ಸಂಭವಿಸುತ್ತಿರುವ ಅವಘಡಗಳಿಗೆ ಸಂಬಂಧಧಿಸಿದಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.
ತೆರೆದ ಕೊಳವೆ ಬಾವಿಯಲ್ಲಿ ಮಕ್ಕಳು ಬಿದ್ದು ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್ ವಾಘೇಲಾ ಮತ್ತು ನ್ಯಾ. ಅಶೋಕ್ ಬಿ ಹಿಂಚಿಗೇರಿ ಪೀಠ, ಕೊಳವೆ ಬಾವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿ ಪಾಲನೆಯ ಬಗ್ಗೆ ಆ. 25ರ ಒಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ. ಈ ಹಿಂದೆ ಹರ್ಯಾದಲ್ಲೂ ಇದೇ ರೀತಿಯ ಪ್ರಕರಣ ನಡೆದ ಹಿನ್ನೆಲಯಲ್ಲಿ ನಿರುಪಯುಕ್ತ ಹಾಗೂ ಕಾರ್ಯ ನಿರ್ವಹಿಸುತ್ತಿರುವ ಕೊಳವೆ ಬಾವಿಗಳ ಪರಿವೀಕ್ಷಣೆಗೆಂದೇ ವಿಶೇಷ ಅಧಿಕಾರಿಗಳ ಸಮಿತಿ ರಚಿಸಲಾಗಿತ್ತು. ಇದೇ ರೀತಿಯಲ್ಲಿ ರಾಜ್ಯದಲ್ಲೂ ಸಮಿತಿ ರಚಿಸುವಂತೆ ಅರ್ಜಿದಾರರು ಪೀಠಕ್ಕೆ ಕೋರಿ ಕೊಂಡರು. ಸುಪ್ರೀಂ ಆದೇಶದಲ್ಲಿ ನಿರುಪಯುಕ್ತ ಕೊಳವೆ ಬಾವಿಗಳ ನಿರ್ವಹಣೆ ಬಗ್ಗೆ ಉಲ್ಲೇಖವಿದೆ. ಇದನ್ನು ರಾಜ್ಯ ಸರ್ಕಾರ ಪಾಲಿಸಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ಕಾರ್ಯದರ್ಶಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.