ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರು ಉಪಮುಖ್ಯಮಂತ್ರಿ ಹುದ್ದೆಗೆ ಆಸೆ ಪಡುವುದು ತಪ್ಪಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿಸಿಎಂ ಹುದ್ದೆಗೆ ಯಾರು ಬೇಕಾದರೂ ಆಸೆ ಪಡಬಹುದು ಎಂದು ಹೇಳಿದರು. ರಾಜ್ಯ ಸಚಿವ ಸಂಪುಟ ಪುನಾರಚನೆಯಾಗುವುದಿಲ್ಲ. ವಿಧಾನಸಭೆಯ ಮೂರು ಕ್ಷೇತ್ರಗಳ ಚುನಾವಣೆ ಬಳಿಕ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ ಅನಗತ್ಯ ರಾಜಕಾರಣ ಮಾಡುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಭೂ ಅಕ್ರಮ ನಡೆದಿಲ್ಲ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಈಗಾಗಲೇ ನಾನು ಪ್ರಕಟಿಸಿದ್ದೇನೆ. ಪ್ರಕ್ರಿಯೆ ಈಗಿನಿಂದಲೇ ಆರಂಭಗೊಂಡಿದೆ. ಇನ್ನು ಎರಡು ಮೂರು ದಿನದಲ್ಲಿ ಆಯೋಗದ ಮುಖ್ಯಸ್ಥರು ಯಾರಾಗಬೇಕೆಂಬುದನ್ನು ನಿರ್ಧರಿಸುತ್ತೇವೆ ಎಂದರು.
ಬಿಜೆಪಿಯವರು ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಅವರದ್ದೇ ಆದ ಸಮಿತಿ ಮಾಡಿಕೊಂಡಿದ್ದರೆ ನಮಗೆ ಬೇಸರವಿಲ್ಲ. ಅವರ ಕಾಲದಲ್ಲಿ ಆದ ಪ್ರಕರಣಗಳ ಬಗ್ಗೆ ಈ ಸಮಿತಿ ತನಿಖೆ ನಡೆಸಲಿ. ಈ ಪ್ರಕರಣ ಶೆಟ್ಟರ್ ಕೊರಳಿಗೆ ಸುತ್ತಿಕೊಳ್ಳುತ್ತದೆ ಎಂಬುದರಲ್ಲಿ ಅನುಮಾನ ಬೇಡ ಎಂದು ಹೇಳಿದರು.