ಬಾಗಲಕೋಟೆ: ಸರ್ಕಾರಕ್ಕೆ ಧರ್ಮಸಂಕಟ. ಸೂಳಿಕೇರಿ ಕೊಳವೆ ಭಾವಿಯಲ್ಲಿ ಸಿಲುಕಿರುವ ಬಾಲಕ ತಿಮ್ಮಣ್ಣನನ್ನು ಮೇಲೆತ್ತುವ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಬಾಲಕನ ತಂದೆಯೂ ಸೇರಿದಂತೆ ಸ್ಥಳೀಯರ ಒತ್ತಡ, ಇನ್ನೊಂದೆಡೆ ಕಾರ್ಯಾಚರಣೆ ನಿಲ್ಲಿಸಿಲಾಗದ ಸ್ಥಿತಿ. ಹೀಗಾಗಿ ಕಾನೂನು ಸಲಹೆ ಪಡೆಯಲು ಸರ್ಕಾರ ಮುಂದಾಗಿದ್ದು, ಶನಿವಾರ ಅಂತಿಮ ತೀರ್ಮಾನ ಕೈಗೊಳ್ಳುವ ಸಂಭವ ಇದೆ.
ಆರು ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣೆ ಯಶಸ್ಸು ನೀಡಿಲ್ಲ. ತಿಮ್ಮಣ್ಣನ ತಂದೆ ಹನುಮಂತಪ್ಪ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಪುನಃ ಮನವಿ ಮಾಡಿಕೊಂಡಿದ್ದಾನೆ. ಉಸ್ತುವಾರಿ ಸಚಿವ ಎಸ್.ಆರ್ ಪಾಟೀಲ್ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳು ಹಾಗೂ ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಸಭೆ ಅಭಿಪ್ರಾಯ, ಕಾನೂನು ತಜ್ಞರ ಸಲಹೆ ಆಧರಿಸಿ ಕಾರ್ಯಾಚರಣೆ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಮೂಲಗಳು ತಿಳಿಸಿವೆ.
ಮಗು ಬದುಕಿಲ್ಲ
ಕೊಳವೆ ಬಾವಿಯಲ್ಲಿ ಸಿಲುಕಿರುವ ಬಾಲಕ ತಿಮ್ಮಣ್ಣ ಬದುಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ 160 ಅಡಿ ಆಳದಲ್ಲಿ ಸಿಲುಕಿದ್ದಾನೆ. ಕೊಳೆವ ವಾಸನೆ ಬರುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಬಗ್ಗೆ ತಜ್ಞರು, ಸ್ಥಳೀಯ ಮುಖಂಡರ ಅಭಿಪ್ರಾಯ ಆಧರಿಸಿ ಉತ್ಖನನ ನಿಲ್ಲಿಸುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದರು.
ಐಐಎಸ್ಸಿ ತಂಡ ಭೇಟಿ
ಕೊಳವೆ ಬಾವಿಯೊಳಗಿನಿಂದ ಕೊಳೆತ ವಾಸನೆ ಪ್ರಮಾಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಬಾಲಕನ ಮೇಲೆ ಮಣ್ಣು ಬಿದ್ದಿರುವುದರಿಂದ ಕಾರ್ಯಾಚರಣೆ ಅಸಾಧ್ಯ ಎಂದು ಚೆನ್ನೈನ ರೋಬೋ ತಜ್ಞ ಮಣಿಕಂಠನ್ ಕೈಚೆಲ್ಲಿದ್ದಾರೆ. ಬೆಂಗಳೂರಿನ ಐಐಎಸ್ಸಿ ತಂಡ ಬಂದು ವರದಿ ನೀಡಲಿದೆ.