ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಮಿತ್ ಶಾ ಅವರು ಪ್ರಥಮವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ಡಿದ್ದು ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಬೇಕಿದೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಬಿಜೆಪಿ ಪರಿಷತ್ ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕರ ಸಮ್ಮುಖದಲ್ಲಿ ಅಮಿತ್ ಶಾ ಅಧಿಕಾರ ಸ್ವೀಕರಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಅಧ್ಯಕ್ಷಸ್ಥಾನ ನೀಡಿದ ಬಿಜೆಪಿ ನಾಯಕರಿಗೆ ನಾನು ಚಿರಋಣಿ. ನನ್ನ ಮೇಲೆ ಭರವಸೆ ಇಟ್ಟು ನನಗೆ ಉನ್ನತ ಜವಾಬ್ದಾರಿ ವಹಿಸಿದ್ದಾರೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಖಂಡಿತ ಉಳಿಸುತ್ತೇನೆ. ಅಲ್ಲದೆ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಒಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತ ದೇಶದ ಪ್ರಧಾನಿಯಾಗಬಹುದು ಎಂಬುದನ್ನು ನರೇಂದ್ರ ಮೋದಿ ಅವರು ಸಾಬೀತುಪಡಿಸಿದ್ದಾರೆ. ಅದೇ ರೀತಿ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿದ್ದ ನಾನು ಇಂದು ಅಧ್ಯಕ್ಷನಾಗಿದ್ದೇನೆ. ಹೀಗೆ ಸಾಮಾನ್ಯ ಕಾರ್ಯಕರ್ತನಿಗೆ ಉನ್ನತ ಸ್ಥಾನ ನೀಡುವ ಪದ್ಧತಿ ಕೇವಲ ಬಿಜೆಪಿಯಲ್ಲಿ ಮಾತ್ರ ಇದೆ ಎಂದರು.
ಕಳೆದ ಲೋಕಸಭೆಯಲ್ಲಿ ಬಿಜೆಪಿ ಅಮೋಘ ಜಯ ಗಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್‌ರ ಜೋಡಿಯ ಯಶಸ್ಸು ಇದಾಗಿದೆ. ಕೇಂದ್ರದಲ್ಲಿ ಸರ್ಕಾರ ನಡೆಸಬೇಕು ಎಂಬ ಬಿಜೆಪಿ ಕನಸನ್ನು ಈ ಜೋಡಿ ನನಸು ಮಾಡಿದ್ದು, ಅವರಿಬ್ಬರಿಗೂ ಹೃದಯಪೂರ್ವಕ ಧನ್ಯವಾದ ಅರ್ಪಿಸುವೆ ಎಂದು ಅಮಿತ್ ಶಾ ಹೇಳಿದರು.
ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್ ಸೂಕ್ತ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳದ ಹಿನ್ನೆಲೆಯಲ್ಲಿ ದೇಶ ಸ್ಥಿತಿ ಅಧೋಗತಿಗೆ ಹೋಗಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸುವ ದಕ್ಷ ಪ್ರಧಾನಿಯ ಅವಶ್ಯಕತೆ ದೇಶಕ್ಕೆ ಇತ್ತು. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದಾರೆ ಅವರ ನೇತೃತ್ವದಲ್ಲಿ ದೇಶದ ಅಭಿವೃದ್ಧಿ ಕಾಣಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡುತ್ತಾರೆ. ಅದೇ ರೀತಿ ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುವುದು ಅಂದು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಂದ ಧ್ವಜಾರೋಹಣ ನಡೆಯಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಆಡ್ವಾಣಿ ವಿತ್ತ ಸಚಿವ ಅರುಣ್ ಜೇಟ್ಲಿ ಸೇರಿದಂತೆ ಸುಮಾರು 2 ಸಾವಿರ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.