ಬಿನ್ನಿ ಬೆಂಬಲ ವಾಪಸ್, ಕೇಜ್ರಿವಾಲ್ ಭ್ರಷ್ಟರಿಗಿಂತ ಕಡೆ
ಆಮ್ ಆದ್ಮಿ ಪಕ್ಷದ ಉಚ್ಚಾಟಿತ ಶಾಸಕ ವಿನೋದ್ ಕುಮಾರ್ ಬಿನ್ನಿ ಅವರು ಆಪ್ ಸರ್ಕಾರಕ್ಕೆ ನೀಡಿದ...
ನವದೆಹಲಿ: ಆಮ್ ಆದ್ಮಿ ಪಕ್ಷದ ಉಚ್ಚಾಟಿತ ಶಾಸಕ ವಿನೋದ್ ಕುಮಾರ್ ಬಿನ್ನಿ ಅವರು ಆಪ್ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯಲು ಬುಧವಾರ ನಿರ್ಧರಿಸಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭ್ರಷ್ಟ ರಾಜಕಾರಣಿಗಳಿಗಿಂತ ಕಡೆ ಎಂದು ಆರೋಪಿಸಿದ್ದಾರೆ.
ಕೇಜ್ರಿವಾಲ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುತ್ತಿರುವ ಬಗ್ಗೆ ಇಂದು ಉಪರಾಜ್ಯಪಾಲ ನಜೀಬ್ ಜಂಗ್ ಅವರಿಗೆ ಪತ್ರ ಬರೆಯುವುದಾಗಿ ಬಿನ್ನಿ ತಿಳಿಸಿದ್ದಾರೆ. ಅಲ್ಲದೆ ಕೇಜ್ರಿವಾಲ್ ಭ್ರಷ್ಟರಾಜಕಾರಣಿಗಳಿಗಿಂತ ಅಪಾಯಕಾರಿ. ಅವರು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ದೆಹಲಿಯ ಜನತೆಗೆ ಅಷ್ಟೆ ಅಲ್ಲ ಈಡೀ ದೇಶದ ಜನತೆಗೆ ದ್ರೋಹ ಮಾಡುತ್ತಿದ್ದಾರೆ ಎಂದಿದ್ದಾರೆ.
ಈ ಮಧ್ಯೆ ಜನಲೋಕಪಾಲ ಮಸೂದೆ ವಿಚಾರದಲ್ಲಿ ತಾವು ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಬಿನ್ನಿ ತಿಳಿಸಿದ್ದಾರೆ. ಒಂದು ವೇಳೆ ಸರ್ಕಾರ ಅಣ್ಣಾ ಹಜಾರೆ ಅವರ ಜನಲೋಕಪಾಲ ಮಸೂದೆಯನ್ನು ಜಾರಿಗೊಳಿಸುವುದಾದರೆ ತಾವು ಬೆಂಬಲಿಸುವುದಾಗಿ ಬಿನ್ನಿ ಹೇಳಿದ್ದಾರೆ.