ಉಗ್ರ ದಾಳಿಯಲ್ಲಿ ಭಾಗ್ವತ್ ಕೈವಾಡ; ಆರೋಪ ತಳ್ಳಿ ಹಾಕಿದ ಆರೆಸ್ಸೆಸ್ಸ್
2007ರ ಸಂಜೋತಾ ಎಕ್ಸ್ಪ್ರೆಸ್, ಹೈದ್ರಾಬಾದ್ ಮೆಕ್ಕಾ ಮಸೀದಿ ಮತ್ತು ಅಜ್ಮೀರ್ ದರ್ಗಾ ಮೇಲಿನ ದಾಳಿಯಲ್ಲಿ ಆರೆಸ್ಸೆಸ್ಸ್ ಮುಖ್ಯಸ್ಥ ...
ನವದೆಹಲಿ: 2007ರ ಸಂಜೋತಾ ಎಕ್ಸ್ಪ್ರೆಸ್, ಹೈದ್ರಾಬಾದ್ ಮೆಕ್ಕಾ ಮಸೀದಿ ಮತ್ತು ಅಜ್ಮೀರ್ ದರ್ಗಾ ಮೇಲಿನ ದಾಳಿಯಲ್ಲಿ ಆರೆಸ್ಸೆಸ್ಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ.
ಇಂಥಾ ಆರೋಪವನ್ನು ಮಾಡಿದ್ದು ಬೇರೆ ಯಾರೂ ಅಲ್ಲ, ದಾಳಿ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ವಾಮೀ ಆಸೀಮಾನಂದ !
ಮ್ಯಾಗಜಿನ್ವೊಂದಕ್ಕೆ ಆಸೀಮಾನಂದ ಅವರು ನೀಡಿದ ಸಂದರ್ಶನದಲ್ಲಿ ಆರೆಸ್ಸೆಸ್ಸ್ ಮುಖ್ಯಸ್ಥ ಈ ಉಗ್ರ ದಾಳಿಗಳಿಗೆ ಪ್ರೇರಣೆ ನೀಡಿದ್ದರು ಎಂದು ಆರೋಪಿಸಿದ್ದರು.
ಭಾಗ್ವತ್ ಅವರು ಆರೆಸ್ಸೆಸ್ಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ವೇಳೆ ಇಂಥಾ ಉಗ್ರ ಕೃತ್ಯಗಳನ್ನು ನಡೆಸುವಂತೆ ಆದೇಶಿಸಿದ್ದರು. ಮಾತ್ರವಲ್ಲದೆ ಈ ಉಗ್ರ ಕೃತ್ಯಗಳೊಂದಿಗೆ ಆರೆಸ್ಸೆಸ್ಸ್ ಹೆಸರು ತಳುಕು ಹಾಕಬಾರದೆಂದು ಭಾಗ್ವತ್ ಸೂಚನೆ ನೀಡಿದ್ದರು ಎಂದು ಆಸೀಮಾನಂದ ಹೇಳಿದ್ದಾರೆ.
ಪ್ರಸ್ತುತ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಆರೆಸ್ಸೆಸ್ಸ್, ಈ ಆರೋಪ ಸತ್ಯಕ್ಕೆ ದೂರವಾಗಿರುವುದು. ಮ್ಯಾಗಜೀನ್ನಲ್ಲಿ ನೀಡಿರುವ ಸಂದರ್ಶನ ಆಧಾರ ರಹಿತ ಮತ್ತು ಬೊಗಳೆ ಎಂದು ಹೇಳಿದೆ.
ಮ್ಯಾಗಜೀನ್ನ ಸತ್ಯಸಂಧತೆಯ ಬಗ್ಗೆ ಪ್ರಶ್ನಿಸಿದ ಬಿಜೆಪಿ ನಾಯಕ ಪ್ರಕಾಶ್ ಜವಡೇಕರ್, ಈ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ.