ದೆಹಲಿ ಉಪರಾಜ್ಯಪಾಲರ ವಿರುದ್ಧವೇ ಆಪ್ ವಾಗ್ದಾಳಿ
ಜನಲೋಕಪಾಲ ಮಸೂದೆ ಸಂಬಂಧ ದೆಹಲಿ ಉಪ ರಾಜ್ಯಪಾಲ ನಜೀಬ್ ಜಂಗ್ ಹಾಗೂ ದೆಹಲಿ ಸರ್ಕಾರದ ಮಧ್ಯೆ ಜಟಾಪಟಿ ಶುರುವಾಗಿದ್ದು,
ನವದೆಹಲಿ: ಜನಲೋಕಪಾಲ ಮಸೂದೆ ಸಂಬಂಧ ದೆಹಲಿ ಉಪ ರಾಜ್ಯಪಾಲ ನಜೀಬ್ ಜಂಗ್ ಹಾಗೂ ದೆಹಲಿ ಸರ್ಕಾರದ ಮಧ್ಯೆ ಜಟಾಪಟಿ ಶುರುವಾಗಿದ್ದು, ಈ ಸಂಬಂಧ ಉಪ ರಾಜ್ಯಪಾಲರ ವಿರುದ್ಧವೇ ಆಮ್ ಆದ್ಮಿ ಪಕ್ಷ ಶುಕ್ರವಾರ ವಾಗ್ದಾಳಿ ನಡೆಸಿದೆ. ಅಲ್ಲದೆ ನಜೀಬ್ ಜಂಗ್ ಅವರನ್ನು 'ಕಾಂಗ್ರೆಸ್ ಏಜೆಂಟ್' ಎಂದು ಕರೆದಿದೆ.
ಉಪ ರಾಜ್ಯಪಾಲರ ಕಾರ್ಯವೈಖರಿ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿರುವ ಆಪ್ ನಾಯಕ ಅಶುತೋಷ್ ಅವರು, ರಾಜಭವನದಲ್ಲಿ ಚರ್ಚೆಯಾಗುವ ಹಲವು ಪ್ರಮುಖ ವಿಷಯಗಳು ಹೇಗೆ ಸೋರಿಕೆಯಾಗುತ್ತಿವೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರು ದೆಹಲಿಗಾಗಿ ಕೆಲಸ ಮಾಡಲಿ, ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡುವುದು ಬೇಡ ಎಂದು ಆಶುತೋಷ್ ಒತ್ತಾಯಿಸಿದ್ದಾರೆ.
ಮುಂದಿನ ವಾರ ಸಾರ್ವಜನಿಕ ಸ್ಥಳದಲ್ಲೇ ಜನಲೋಕಪಾಲ ಮಸೂದೆ ಕುರಿತು ಚರ್ಚಿಸಿ, ಅಂಗೀಕಾರ ಪಡೆಯುವುದಕ್ಕೆ ಆಮ್ ಆದ್ಮಿ ಸರ್ಕಾರ ಮುಂದಾಗಿದೆ. ಆದರೆ ಇದಕ್ಕೆ ರಾಜ್ಯಪಾಲರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.