ಶಾಸಕರು ಸಾಲ ತೀರಿಸಲು ಜಿ-ಕೆಟಗರಿ ಸೈಟ್ ಪಡೆಯುತ್ತಾರೆ: ಎಚ್ಡಿಕೆ
ಬೆಂಗಳೂರಿನಲ್ಲಿ ಶಾಸಕರು ಜಿ-ಕೆಟಗರಿ ಸೈಟ್ ಯಾಕೆ ಪಡೆಯುತ್ತಾರೆ? ಅವರಿಗೆ ಏನು ಕಮ್ಮಿ? ಎಂಬ ಸಾರ್ವಜನಿಕರ ಸಾಮಾನ್ಯ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ...
ಮೈಸೂರು: ಬೆಂಗಳೂರಿನಲ್ಲಿ ಶಾಸಕರು ಜಿ-ಕೆಟಗರಿ ಸೈಟ್ ಯಾಕೆ ಪಡೆಯುತ್ತಾರೆ? ಅವರಿಗೆ ಏನು ಕಮ್ಮಿ? ಎಂಬ ಸಾರ್ವಜನಿಕರ ಸಾಮಾನ್ಯ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಉತ್ತರ ನೀಡಿದ್ದಾರೆ.
ಶಾಸಕರು ಜಿ-ಕೆಟಗರಿ ಸೈಟ್ ಪಡೆಯೋದು ಮನೆ ಕಟ್ಟೋದಕ್ಕೆ ಅಲ್ಲ. ಬದಲಾಗಿ ಅವರು ಚುನಾವಣೆ ಸಂದರ್ಭದಲ್ಲಿ ಮಾಡಿದ ಸಾಲ ತೀರಿಸಲು ಬೆಂಗಳೂರಿನಲ್ಲಿ ಜಿ-ಕೆಟಗರಿ ಸೈಟ್ ಪಡೆಯುತ್ತಾರೆ ಎಂದು ಮಾಜಿ ಸಿಎಂ ಹೇಳಿದ್ದಾರೆ.
ಇತ್ತೀಚಿಗೆ ಮುಖ್ಯಮಂತ್ರಿಗಳ ಕೋಟಾದಡಿ ನೀಡುವ ಜಿ-ಕೆಟಗರಿ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಆ ನಿವೇಶನಗಳನ್ನು ವಾಪಸ್ ಪಡೆಯುವಂತೆ ಹೈಕೋರ್ಟ್ ಬಿಡಿಎಗೆ ಆದೇಶಿಸಿತ್ತು. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಇನ್ನು ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಧರ್ಮಸಿಂಗ್, ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ 300ಕ್ಕು ಹೆಚ್ಚು ಮಂದಿಗೆ ಜಿ-ಕೆಟಗರಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಬಹುತೇಕ ಫಲಾನುಭಿಗಳು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಮತ್ತು ಸಂಸದರಾಗಿದ್ದಾರೆ.