ಗುಜರಾತ್ ಅಭಿವೃದ್ದಿ ಆಗಿರುವುದು ಕಾಂಗ್ರೆಸ್ನಿಂದ ಮೋದಿಯಿಂದ ಅಲ್ಲ!
ಇಂಪಾಲ್ನಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಮಾಹಿತಿ ಮತ್ತು ಪ್ರಸಾರಾಂಗ ಸಚಿವ...
ನವದೆಹಲಿ: ಇಂಪಾಲ್ನಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಮಾಹಿತಿ ಮತ್ತು ಪ್ರಸಾರಾಂಗ ಸಚಿವ ಮನೀಶ್ ತಿವಾರಿ, ಗುಜರಾತ್ನಲ್ಲಿ ಅಭಿವೃದ್ಧಿ ಮಾಡಿರುವುದು ಕಾಂಗ್ರೆಸ್, ಮೋದಿಯಲ್ಲ ಎಂದು ಹೇಳಿದ್ದಾರೆ.
ಕಳೆದ 11 ವರ್ಷದಲ್ಲಿ ಗುಜರಾತ್ನಲ್ಲಿ ಎಷ್ಟು ಪ್ರಗತಿಯಾಗಿದೆ ಎಂಬುದು ಪ್ರಮುಖ ಪ್ರಶ್ನೆ. ಗುಜರಾತ್ನಲ್ಲಿ ಏನೆಲ್ಲ ಪ್ರಗತಿಯಾಗಿದೆಯೋ ಅದೆಲ್ಲ ಸಾಧ್ಯವಾಗಿರುವುದು ಕಾಂಗ್ರೆಸ್ನಿಂದ ಎಂದು ತಿವಾರಿ ಹೇಳಿದ್ದಾರೆ.
ನರೇಂದ್ರ ಮೋದಿ ಅವರು ಚಹಾ ಬಗ್ಗೆ ಚರ್ಚಿಸಲು ಸಿದ್ಧರಾಗಿದ್ದಾರೆಯೇ ಹೊರತು ಅವರೇನು ಅಭಿವೃದ್ಧಿ ಮಾಡಿದ್ದಾರೆ ಎಂಬುದರ ಬಗ್ಗೆ ಅಲ್ಲ. ಅವರೇನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಹೇಳಲಿ..ನಾವು ಅವರನ್ನು ಚರ್ಚೆಗೆ ಆಹ್ವಾನಿಸುತ್ತಿದ್ದೇವೆ ಎಂದು ತಿವಾರಿ ನುಡಿದಿದ್ದಾರೆ.
ಅವರ ಬಳಿ ಈ ಪ್ರಶ್ನೆಗಳಿಗೆ ಉತ್ತರವಿಲ್ಲದೇ ಇರುವ ಕಾರಣ ಅವರು ಮುಂದೆ ಬರುತ್ತಿಲ್ಲ. ಆದರೆ ಈ ಪ್ರಶ್ನೆಗಳಿಗೆ ಅವರು ಉತ್ತರ ನೀಡಲೇ ಬೇಕಾಗಿದೆ. ಅನಂತರವೇ ಅವರು ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸಲಿ ಎಂದು ತಿವಾರಿ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಶನಿವಾರ ಇಂಪಾಲ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಸರ್ಕಾರ ಈಶಾನ್ಯ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. ಮಾತ್ರವಲ್ಲದೆ ಮಣಿಪುರದಲ್ಲಿ ಕಾಂಗ್ರೆಸ್ ಕೆಟ್ಟ ಆಳ್ವಿಕೆ ಮಾಡಿದೆ ಎಂದು ದೂರಿದ್ದರು.