ರಾಹುಲ್ ಬಾಲಿಶ ಹೇಳಿಕೆಗೆ ಪ್ರತಿಕ್ರಿಯಿಸಲ್ಲ: ಆರೆಸ್ಸೆಸ್ಸ್
ಆರೆಸ್ಸೆಸ್‌ನ ಸಿದ್ಧಾಂತಗಳಿಂದಲೇ ಮಹಾತ್ಮ ಗಾಂಧಿ ಹತ್ಯೆಯಾಗಿರುವುದು ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್...
ನವದೆಹಲಿ: ಆರೆಸ್ಸೆಸ್‌ನ ಸಿದ್ಧಾಂತಗಳಿಂದಲೇ ಮಹಾತ್ಮ ಗಾಂಧಿ ಹತ್ಯೆಯಾಗಿರುವುದು ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಬಾಲಿಶ ಎಂದು ಆರೆಸ್ಸೆಸ್ ಹೇಳಿದೆ.
ಶನಿವಾರ ಗುಜರಾತ್‌ನಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ ರಾಹುಲ್ ಮೋದಿ ಅವರ ಮೇಲೆ ಕಿಡಿಕಾರಿದ್ದು, ಆರೆಸ್ಸೆಸ್ ಸಿದ್ಧಾಂತಗಳೇ ಮಹಾತ್ಮ ಗಾಂಧಿ ಹತ್ಯೆಗೆ ಕಾರಣ ಎಂದು ಆಪಾದಿಸಿದ್ದರು. ರಾಹುಲ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಆರೆಸ್ಸೆಸ್ಸ್ ವಕ್ತಾರ ರಾಮ್ ಮಾಧವ್, ರಾಹುಲ್ ಹೇಳಿಕೆ ನಿರಾಧಾರ, ಶಿಶುವಿಹಾರದ ಮಕ್ಕಳಂತೆ ಹೇಳಿಕೆ ನೀಡಿರುವ ರಾಹುಲ್ ಬಗ್ಗೆ ನಾವೇನೂ ಪ್ರತಿಕ್ರಿಯಿಸಲ್ಲ ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ಆರೆಸ್ಸೆಸ್ ಸಿದ್ಧಾಂತಗಳಿವೆ ಎಂದು ಹೇಳುವವರೇ ಈಗ ಮಹಾತ್ಮಾಗಾಂಧಿಯವರ ಸಿದ್ಧಾಂತವನ್ನು ಕೊಲ್ಲುತ್ತಿದ್ದಾರೆ ಎಂದು ಮಾಧವ್ ಹೇಳಿದ್ದಾರೆ.
ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಮೋದಿಯವರು ಸರ್ದಾರ್ ವಲ್ಲಭಾಯಿ ಪಟೇಲ್ ಪುತ್ಥಳಿ ನಿರ್ಮಾಣ ಮಾಡುವುದರ ಬಗ್ಗೆ ಕಿಡಿ ಕಾರಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮಾಧವ್, ಈಗ ಯಾಕೆ ಕಾಂಗ್ರೆಸ್‌ಗೆ ಸರ್ದಾರ್ ಪಟೇಲರ ನೆನಪು ಬಂತು? ಅವರು ಬದುಕಿದ್ದಾಗ ಅವರ ತತ್ವಕ್ಕೆ ಇವರು ಬೆಲೆಕೊಟ್ಟಿದ್ದರೆ? ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ನೇತಾರ ಸುಧಾಂಶು ತ್ರಿವೇದಿ, ಯಾರಾದರೂ ಮಹಾತ್ಮಾ ಗಾಂಧಿಯವರ ಸಿದ್ಧಾಂತವನ್ನು ಹತ್ಯೆಗೈದಿದ್ದರೆ ಅದು ಕಾಂಗ್ರೆಸ್ಸೇ ಎಂದು ಕಾಂಗ್ರೆಸ್‌ಗೇ ತಿರುಗುಬಾಣ ಎಸೆದಿದ್ದಾರೆ.