1 ರು.ಗೆ ಅಕ್ಕಿ ಕೊಟ್ಟರೆ ಬಡತನ ಹೋಗಲ್ಲ: ಕುಮಾರಸ್ವಾಮಿ
ಭಾನುವಾರ ಮೈಸೂರಿನಲ್ಲಿ ನಡೆದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷ ಹಾಗು ಸಿಎಂ ಸಿದ್ಧರಾಮಯ್ಯ ವಿರುದ್ಧ ...
ಮೈಸೂರು: ಭಾನುವಾರ ಮೈಸೂರಿನಲ್ಲಿ ನಡೆದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷ ಹಾಗು ಸಿಎಂ ಸಿದ್ಧರಾಮಯ್ಯ ವಿರುದ್ಧ ಜೆಡಿಎಸ್ ನಾಯಕ ಕುಮಾರ ಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಭಾಷಣದುದ್ದಕ್ಕೂ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ಪ್ರಸ್ತುತ ಸರ್ಕಾರ ಹಿಂದುಳಿದ ವರ್ಗದವರಿಗೆ ನೀಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಹೇಳಿದ್ದಾರೆ.
ಬಡತನ ನಿರ್ಮೂಲನೆಗಾಗಿ ಸಿದ್ಧರಾಮಯ್ಯನವರು 1 ರು.ಗೆ ಕೆಜಿ ಅಕ್ಕಿಯನ್ನು ಕೊಡುತ್ತಿದ್ದಾರೆ. ಬಡವನಿಗೆ 30 ಕೆಜಿ ಅಕ್ಕಿ ಕೊಟ್ಟ ಕೂಡಲೇ ಅಲ್ಲಿ ಬಡತನ ನಿರ್ಮೂಲನೆಯಾಗಲ್ಲ ಎಂದು ಹೇಳಿದ್ದಾರೆ.
ಅದೇ ವೇಳೆ ರೈತರನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಸಿದ್ಧರಾಮಯ್ಯನವರು ರೈತರಿಗಾಗಿ ಯೋಜನೆಗಳನ್ನು ತಂದರೂ ರೈತರಿಗೆ ಮೇಲೆ ಬರಲು ಸಾಧ್ಯವಾಗಿಲ್ಲ. ರೈತರು ಒಂದು ಸಮಾಜಕ್ಕೆ ಸೇರಿದವರಲ್ಲ. ಅವರು ಎಲ್ಲ ವರ್ಗ, ಜಾತಿಯಲ್ಲಿಯೂ ಇದ್ದಾರೆ. ಅವರ ಅಭಿವೃದ್ಧಿಗಾಗಿ ಸರ್ಕಾರ ಯಾವ ಕಾರ್ಯಕ್ರಮವನ್ನು ಕೈಗೊಂಡಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಇದೀಗ ಚಿಕ್ಕಮಗಳೂರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರ ಪೊಲೀಸರನ್ನು ನಿಯೋಜಿಸಿದೆ ಎನ್ನುವ ಮಾಹಿತಿ ನಮಗೆ ಲಭಿಸಿದೆ. ವಿಧಾನಸೌಧದಲ್ಲಿ ರೈತರಿಗೆ ಸಹಾಯ ಮಾಡುತ್ತೇವೆ ,ಅವರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿದ ಮುಖ್ಯಮಂತ್ರಿಗಳ ಭರವಸೆ ಏನಾಯ್ತು?
ಸರ್ಕಾರಕ್ಕೆ ನಾವು ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ರೈತರ ಪರವಾಗಿ, ಜವಾಬ್ದಾರಿಯುತ ವಿಪಕ್ಷದ ನಾಯಕನಾಗಿ ನಾನು ಹೇಳಬಯಸುವುದೇನೆಂದರೆ ಸರ್ಕಾರ ರೈತರನ್ನು ಬೀದಿಪಾಲು ಮಾಡಿದರೆ ಅದರ ವಿರುದ್ಧ ಹೋರಾಡಲು ಜೆಡಿಎಸ್ ಸಿದ್ಧವಾಗಿದೆ. ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುವ ರೈತಾಪಿ ಕುಟುಂಬದ ಹೆಣ್ಣು ಮಕ್ಕಳ ಕಣ್ಣೀರಿನ ಶಾಪ ಸರ್ಕಾರಕ್ಕೆ ತಟ್ಟುತ್ತದೆ ಎಂದು ಕುಮಾರಸ್ವಾಮಿ ಸಮಾವೇಶದಲ್ಲಿ ಸಿದ್ಧರಾಮಯ್ಯನವರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.