ತಲೆಗೆ ಬಲವಾದ ಹೊಡೆತದಿಂದ ನಿಡೋ ತಾನಿಯ ಸಾವು: ವರದಿ
ಈಶಾನ್ಯ ವಿದ್ಯಾರ್ಥಿ ನಿಡೋ ತಾನಿಯಾ ಅವರ ತಲೆ ಮತ್ತು ಮುಖದ ಮೇಲೆ ಗಂಭೀರವಾಗಿ ಗಾಯಗಳಾಗಿದ್ದ ಹಿನ್ನಲೆಯಲ್ಲಿ...
ನವದೆಹಲಿ: ಈಶಾನ್ಯ ವಿದ್ಯಾರ್ಥಿ ನಿಡೋ ತಾನಿಯಾ ಅವರ ತಲೆ ಮತ್ತು ಮುಖದ ಮೇಲೆ ಗಂಭೀರವಾಗಿ ಗಾಯಗಳಾಗಿದ್ದ ಹಿನ್ನಲೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಸೋಮವಾರ ವೈದ್ಯಕೀಯ ವರದಿ ದೃಢಪಡಿಸಿದೆ.
ನಿಡೋ ತಾನಿಯಾಗೆ ಮುಖ ಮತ್ತು ತಲೆಯ ಮೇಲೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ವರದಿ ತಿಳಿಸಿದೆ.
ನಿಡೋ ತಾನಿಯಾ ಹತ್ಯೆ ಪ್ರಕರಣ ಸಂಬಂಧ ಮೂರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ನಿಡೋ ಪಲ್ಲವಿ ಅವರ ಪುತ್ರ ನಿಡೋ ತಾನಿಯಾ ಅವರನ್ನು ದೆಹಲಿಯಲ್ಲಿ ಹತ್ಯೆ ಮಾಡಲಾಗಿತ್ತು.
ದೆಹಲಿ ಹೈಕೋರ್ಟ್ ನಿಡೋ ತಾನಿಯ ಹತ್ಯೆ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದೆ.
ಆಫ್ರಿಕಾ ಮತ್ತು ಈಶಾನ್ಯ ಭಾರತೀಯರೇ ಹೆಚ್ಚಾಗಿ ವಾಸಿಸುತ್ತಿರುವ ದಕ್ಷಿಣ ದೆಹಲಿಯ ಲಜಪತ್ ನಗರಕ್ಕೆ ಕಳೆದ ಜನವರಿ 29ರಂದು ತನ್ನ ಸ್ನೇಹಿತನನ್ನು ಹುಡುಕಿಕೊಂಡು ನಿಡೋ ತಾನಿಯ ತೆರಳಿದ್ದನು. ಲಜಪತ್ ನಗರದ ಅಂಗಡಿಯೊಂದರ ಮುಂದೆ ಕುಳಿತಿದ್ದ ಕೆಲ ಯುವಕರು ನಿಡೋ ತಾನಿಯನ ಸ್ಪೈಕ್ ಹೇರ್ ಸ್ಟೈಲ್ ಅನ್ನು ಕಂಡು ಹಾಸ್ಯ ಮಾಡಿದ್ದಾರೆ. ಈ ವೇಳೆ ನಿಡೋ ತಾನಿಯ ಮತ್ತು ಆ ಯುವಕರ ಗುಂಪಿನ ನಡುವೆ ವಾಗ್ವಾದ ಉಂಟಾಗಿ ಇಬ್ಬರು ಪರಸ್ಪರ ಘರ್ಷಣೆಗೆ ಇಳಿದಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಎರಡೂ ಗುಂಪನ್ನು ಸಮಾಧಾನಗೊಳಿಸಿ ಮನೆಗೆ ಕಳುಹಿಸಿದ್ದಾರೆ.
ನಂತರ ಮನೆಗೆ ತೆರಳಿ ಮಲಗಿದ್ದ ನಿಡೋ ತಾನಿಯಾ ಜನವರಿ 30ರಂದು ಸಾವನ್ನಪ್ಪಿದ್ದಾನೆ.