ತೆಲಂಗಾಣ ವಿವಾದ: ಬಿಜೆಪಿಗೆ ಆಹ್ವಾನವಿತ್ತ ಪ್ರಧಾನಿ
ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗೆ ಸಂಬಂಧಿಸಿದಂತೆ ಉಭಯ ಸದನಗಳಲ್ಲಿ ಸೀಮಾಂಧ್ರ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ...
ನವದೆಹಲಿ: ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗೆ ಸಂಬಂಧಿಸಿದಂತೆ ಉಭಯ ಸದನಗಳಲ್ಲಿ ಸೀಮಾಂಧ್ರ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇದನ್ನು ಬೆಂಬಲಿಸುವಂತೆ ಬಿಜೆಪಿ ಹಿರಿಯ ನಾಯಕರನ್ನು ಸೋಮವಾರ ಮನವಿ ಮಾಡಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಮತ್ತು ಭ್ರಷ್ಟಾಚಾರ ವಿರೋಧಿ ಶಾಸನಗಳಿಗೆ ಅನುಮೋದನೆ ಪಡೆದುಕೊಳ್ಳುವ ಸಲುವಾಗಿ ಯುಪಿಎ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಮಸೂದೆಗೆ ಬೆಂಬಲ ನೀಡುವಂತೆ ಕೋರುವ ಸಲುವಾಗಿ ಪ್ರಧಾನಿ ಅವರು ಫೆ.12ರಂದು ಬಿಜೆಪಿ ನಾಯಕರು, ಸಂಸದರನ್ನು ಭೋಜನಕೂಟಕ್ಕೆ ಆಹ್ವಾನಿಸಿದ್ದಾರೆ.
ತೆಲಂಗಾಣ ರಚನೆ ಹಾಗೂ ಭ್ರಷ್ಟಾಚಾರ ತಡೆ ಮಸೂದೆ ಸೇರಿದಂತೆ ಇತರ ಕೆಲವು ಮಸೂದೆಗಳ ಮಂಡನೆ ಆಗಬೇಕಿರುವುದರಿಂದ ಪ್ರಧಾನಿಯವರು ಮಾತುಕತೆ ನಡೆಸಲು ಈ ಭೋಜನಕೂಟ ಕರೆದಿದ್ದಾರೆ.
ತಮ್ಮ ನಿವಾಸದಲ್ಲಿ ಏರ್ಪಡಿಸಲಿರುವ ಈ ಭೋಜನಕೂಟಕ್ಕೆ ಆಹ್ವಾನ ನೀಡಲು ಸ್ವತಃ ಪ್ರಧಾನಿಯವರೇ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಹಾಗೂ ಉಭಯ ಸದನಗಳ ವಿಪಕ್ಷ ನಾಯಕರಾದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದರು. ತೆಲಂಗಾಣ ರಾಜ್ಯ ರಚನೆಗೆ ತನ್ನ ಬೆಂಬಲ ಇರುವುದಾಗಿ ಈಗಾಗಲೇ ಬಿಜೆಪಿ ಸ್ಪಷ್ಟಪಡಿಸಿದೆ.