ತೃತೀಯ ರಂಗ ಕಾಂಗ್ರೆಸ್ ಬಚಾವ್ ಮಾಡುವ ರಂಗ: ಮೋದಿ
ಭುವನೇಶ್ವರ್: ಒಡಿಶಾದ ಭುವನೇಶ್ವರ್ನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ತೃತೀಯ ರಂಗ ರಚನೆ ವಿರುದ್ಧ ಕಿಡಿಕಾರಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು, ತೃತೀಯ ರಂಗ ಕಾಂಗ್ರೆಸ್ ಅನ್ನು ಬಚಾವ್ ಮಾಡುವ ರಂಗ ಎಂದು ಟೀಕಿಸಿದ್ದಾರೆ.
ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಮೋದಿ, ತೃತೀಯ ರಂಗ ರಚನೆ ವಿರುದ್ಧ ಕಿಡಿಕಾರಿದ್ದಾರೆ. ತೃತೀಯ ರಂಗ ರಚನೆ ಕೇವಲ ಸಂದಿಗ್ನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ನ್ನು ಬಚಾವ್ ಮಾಡವ ರಂಗವಾಗಿದೆ ಎಂದು ಟೀಕಿಸಿದ್ದಾರೆ.
ತೃತೀಯ ರಂಗದಲ್ಲಿ ಒಟ್ಟು 11 ಪ್ರಾದೇಶಿಕ ಪಕ್ಷಗಳು ಕೈಜೋಡಿಸಿವೆ. ಅದರಲ್ಲಿ ಸುಮಾರು 9 ಪಕ್ಷಗಳು ಕಾಂಗ್ರೆಸ್ ಜತೆ ಗುರುತಿಸಿಕೊಂಡಿವೆ. ಇದನ್ನು ಗಮನಿಸಿದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಹುಮತ ಸಿಗದಿದ್ದ ಪಕ್ಷದಲ್ಲಿ ಕಾಂಗ್ರೆಸ್ನ ಕೈಹಿಡಿಯಲು ಈ ತೃತೀಯ ರಂಗ ಸ್ಥಾಪನೆಯ ಉದ್ದೇಶವಾಗಿದೆ. ತೃತೀಯ ರಂಗ ರಚನೆಗೆ ಮುಂದಾಗಿರುವವರು ಮೊದಲು ಒಡಿಶಾಗೆ ಬಂದು ಇಲ್ಲಿನ ಪರಿಸ್ಥಿತಿ ಗಮನಿಸಲಿ ಎಂದು ಮೋದಿ ಹೇಳಿದ್ದಾರೆ.
ಈ ವೇಳೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿರುದ್ಧ ಕಿಡಿಕಾರಿದ ಮೋದಿ, ಪಟ್ನಾಯಕ್ ಆಡಳಿತದಲ್ಲಿ ಒಡಿಶಾ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಒಡಿಶಾದ ಜನ ಕೆಲಸ ಅರಸಿ ಗುಜರಾತ್ಗೆ ಬರುತ್ತಿದ್ದಾರೆ. ಇದು ನಿಲ್ಲಬೇಕು. ಸ್ಥಳೀಯರಿಗೆ ಸ್ವತಃ ಊರಿನಲ್ಲೇ ಉದ್ಯೋಗ ಸಿಗುವಂತಾಗಬೇಕು. ಹಾಗೇ ಮಾಡುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿರುತ್ತದೆ. ಆದರೆ ಒಡಿಶಾದಲ್ಲಿ ಸರ್ಕಾರ ನಡೆಸುತ್ತಿರುವ ಪಟ್ನಾಯಕ್ ಅವರು ಯಾವುದೇ ಉದ್ಯೋಗ ಖಾತ್ರಿ ಯೋಜನೆಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.