ನಿಡೋ ತಾನಿಯಾ ಹತ್ಯೆ: 4ನೇ ಆರೋಪಿ ಬಂಧನ
ನವದೆಹಲಿ: ಅರುಣಾಚಲ್ ಪ್ರದೇಶದ ವಿದ್ಯಾರ್ಥಿ ನಿಡೋ ತಾನಿಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಾಲ್ಕನೇ ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ.
ನಿಡೋ ತಾನಿಯಾ ಹತ್ಯೆ ಪ್ರಕರಣ ಸಂಬಂಧ ಮೂರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿದ್ದ ಇನ್ನು ಮೂವರು ಆರೋಪಿಗಳ ಪೈಕಿ ಓರ್ವನನ್ನು ಇಂದು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಶಾಸಕ ನಿಡೋ ಪಲ್ಲವಿ ಅವರ ಪುತ್ರ ನಿಡೋ ತಾನಿಯಾ ಅವರನ್ನು ದೆಹಲಿಯಲ್ಲಿ ಹತ್ಯೆ ಮಾಡಲಾಗಿತ್ತು. ನಿಡೋ ತಾನಿಯಾ ಅವರ ತಲೆ ಮತ್ತು ಮುಖದ ಮೇಲೆ ಗಂಭೀರವಾಗಿ ಗಾಯಗಳಾಗಿದ್ದ ಹಿನ್ನಲೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿ ದೃಢಪಡಿಸಿತ್ತು.
ಆಫ್ರಿಕಾ ಮತ್ತು ಈಶಾನ್ಯ ಭಾರತೀಯರೇ ಹೆಚ್ಚಾಗಿ ವಾಸಿಸುತ್ತಿರುವ ದಕ್ಷಿಣ ದೆಹಲಿಯ ಲಜಪತ್ ನಗರಕ್ಕೆ ಕಳೆದ ಜನವರಿ 29ರಂದು ತನ್ನ ಸ್ನೇಹಿತನನ್ನು ಹುಡುಕಿಕೊಂಡು ನಿಡೋ ತಾನಿಯ ತೆರಳಿದ್ದನು.
ಈ ವೇಳೆ ಲಜಪತ್ ನಗರದ ಅಂಗಡಿಯೊಂದರ ಮುಂದೆ ಕುಳಿತಿದ್ದ ಕೆಲ ಯುವಕರು ನಿಡೋ ತಾನಿಯನ ಸ್ಪೈಕ್ ಹೇರ್ ಸ್ಟೈಲ್ ಅನ್ನು ಕಂಡು ಹಾಸ್ಯ ಮಾಡಿದ್ದಾರೆ. ಈ ವೇಳೆ ನಿಡೋ ತಾನಿಯ ಮತ್ತು ಆ ಯುವಕರ ಗುಂಪಿನ ನಡುವೆ ವಾಗ್ವಾದ ಉಂಟಾಗಿ ಇಬ್ಬರು ಪರಸ್ಪರ ಘರ್ಷಣೆಗೆ ಇಳಿದಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಎರಡೂ ಗುಂಪನ್ನು ಸಮಾಧಾನಗೊಳಿಸಿ ಮನೆಗೆ ಕಳುಹಿಸಿದ್ದರು.
ನಂತರ ಮನೆಗೆ ತೆರಳಿ ಮಲಗಿದ್ದ ನಿಡೋ ತಾನಿಯಾ ಜನವರಿ 30ರಂದು ಸಾವನ್ನಪ್ಪಿದ್ದರು.