ಮತ್ತೊಂದು ಹಗರಣದಲ್ಲಿ ಡಿಕೆಶಿ; ಹಿರೇಮಠ್ ಆರೋಪ
ಬೆಂಗಳೂರಿನ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನೂರಾರು ಕೋಟಿ ರು. ಅವ್ಯವಹಾರ ನಡೆದಿದ್ದು, ಇದರಲ್ಲಿ ...
ಬೆಂಗಳೂರು: ಬೆಂಗಳೂರಿನ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನೂರಾರು ಕೋಟಿ ರು. ಅವ್ಯವಹಾರ ನಡೆದಿದ್ದು, ಇದರಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಂಗಳವಾರ ಪ್ರೆಸ್ಕ್ಸಬ್ನಲ್ಲಿ ಪತ್ರಿಕೋಗೋಷ್ಠಿ ನಡೆಸಿದ ಸಮಾಜ ಪರಿವರ್ತನಾ ಸಮುದಾಯ ಟ್ರಸ್ಟ್ನ ಮುಖ್ಯಸ್ಥ ಎಸ್. ಆರ್. ಹಿರೇಮಠ್ ಶಿವಕುಮಾರ್ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ.
ಹಿಂದೆ ಎಸ್ಸೆಂ ಕೃಷ್ಣ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದ ಡಿಕೆಶಿ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನೂರಾರು ಕೋಟಿ ರು. ಅವ್ಯವಹಾರಕ್ಕೆ ಬೆಂಬಲ ನೀಡಿದ್ದಾರೆ ಎಂಬುದು ಹಿರೇಮಠ್ ಆರೋಪ.
ಡಿಕೆಶಿ ಅವರು ಕಾನೂನು ಬಾಹಿರವಾಗಿ ಗೃಹ ನಿರ್ಮಾಣ ಸಹಕಾರ ಸಂಘದ ಜಂಟಿ ಅಭಿವೃದ್ಧಿಗೆ ಖಾಸಗಿ ಬಿಲ್ಡರ್ಗಳ ಜತೆ ಅಕ್ರಮ ಬೆಂಬಲ ನೀಡಿದ್ದಾರೆ. ಮಾತ್ರವಲ್ಲದೆ ಸಂಘದ ಆಸ್ತಿಯನ್ನು ಅಡಮಾನ ಇಟ್ಟು ಸಾಲ ಪಡೆಯಲು ಡಿಕೆಶಿಯವರು ಅನುಮತಿ ನೀಡಿದ್ದಾರೆ.
ಏತನ್ಮಧ್ಯೆ, ಸಂಘದವರ ಮೂರನೇ ವ್ಯಕ್ತಿಗಳಿಗೆ ಸಗಟು ನಿವೇಶನ ಹಂಚಿಕೆ ಮಾಡಿದ್ದು ಅದಕ್ಕೂ ಡಿಕೆಶಿ ಅನುಮತಿ ನೀಡಿದ್ದಾರೆ. ಈ ಎಲ್ಲದಕ್ಕೂ ಅನುಮತಿ ನೀಡುವ ಮೂಲಕ ಡಿಕೆಶಿ ಅವರಿಗೆ ಕೋಟ್ಯಂತರ ರು. ಲಾಭವಾಗಿದೆ. ಆವಾಗ ಮುಖ್ಯಮಂತ್ರಿಯಾಗಿದ್ದ ಎಸ್ಸೆಂ ಕೃಷ್ಣಾ ಕೂಡಾ ಡಿಕೆಶಿ ಅವರಿಗೆ ಸಾಥ್ ನೀಡಿದ್ದರು ಎಂದು ಹಿರೇಮಠ್ ಹೇಳಿದ್ದಾರೆ.
ಡಿಕೆಶಿ ಅವರ ಅಕ್ರಮಗಳನ್ನು ಬಯಲಿಗೆಳೆದಿರುವ ಹಿರೇಮಠ್ ಪ್ರಸ್ತುತ ಹಗರಣದ ಬಗ್ಗೆ ತನಿಖೆಯಾಗಬೇಕು ಹಾಗು ಡಿಕೆಶಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.