ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡ ಸಂಸದ ರಾವ್ ಇಂದ್ರಜಿತ್ ಸಿಂಗ್
ಕಾಂಗ್ರೆಸ್ ಸಂಸದ ರಾವ್ ಇಂದ್ರಜಿತ್ ಸಿಂಗ್ ಅವರು ಗುರುವಾರ ಭಾರತೀಯ ಜನತಾ ಪಾರ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ...
ನವದೆಹಲಿ: ಕಾಂಗ್ರೆಸ್ ಸಂಸದ ರಾವ್ ಇಂದ್ರಜಿತ್ ಸಿಂಗ್ ಅವರು ಗುರುವಾರ ಭಾರತೀಯ ಜನತಾ ಪಾರ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವದ್ರಾ ಅವರ ಭೂ ವ್ಯವಹಾರದ ಬಗ್ಗೆ ತನಿಖೆ ನಡೆಸಿ ಎಂದು ರಾವ್ ಇಂದ್ರಜಿತ್ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಇಂದ್ರಜಿತ್ ಗುರಿಯಾಗಿದ್ದರು.
ಇದರ ಬೆನ್ನಲ್ಲೇ ಇಂದು ಇಂದ್ರಜಿತ್ ಸಿಂಗ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಸಿಂಗ್ ಸೇರ್ಪಡೆಗೆ ಸಂತಸ ವ್ಯಕ್ತಪಡಿಸಿರುವ ಬಿಜೆಪಿ ಅಧ್ಯಕ್ಷ ರಾಜನಾಥ್‌ಸಿಂಗ್, ಇಂದ್ರಜಿತ್ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರು. ಇಂತವಹರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕಾಗಿ 36 ವರ್ಷಗಳ ಕಾಲ ಇಂದ್ರಜಿತ್ ದುಡಿದಿದ್ದರು. 1998, 2004 ಮತ್ತು 2009ರಲ್ಲಿ ಲೋಕಸಭಾ ಸಂಸದರಾಗಿ ಆಯ್ಕೆಗೊಂಡಿದ್ದರು. 1977ರಲ್ಲಿ ಶಾಸಕರಾಗುವುದರ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು.
ಇತ್ತೀಚೆಗಷ್ಟೆ ಇಂದ್ರಜಿತ್ ಅವರು ಹರಿಯಾಣ ಇನ್ಸಾಫ್ ಕಾಂಗ್ರೆಸ್ ಎಂಬ ಪಕ್ಷವನ್ನು ಸ್ಥಾಪಿಸಿದ್ದರು. ಇಂದು ಅಧಿಕೃತವಾಗಿ ಹರಿಯಾಣ ಇನ್ಸಾಫ್ ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.