ಅಂಬಾನಿ ವಿರುದ್ಧ ಎಫ್‌ಐಆರ್ ಹಿನ್ನಲೆ ಮಸೂದೆ ಮಂಡನೆಗೆ ವಿರೋಧ: ಕೇಜ್ರಿವಾಲ್
ಉದ್ಯಮಿ ಮುಖೇಶ್ ಅಂಬಾನಿ ವಿರುದ್ಧ ಎಫ್‌ಐಆರ್ ದಾಖಲಿಸಿದ ಹಿನ್ನಲೆಯಲ್ಲಿ ಜನಲೋಕಪಾಲ ಮಸೂದೆ ಮಂಡನೆಗೆ...
ನವದೆಹಲಿ: ಉದ್ಯಮಿ ಮುಖೇಶ್ ಅಂಬಾನಿ ವಿರುದ್ಧ ಎಫ್‌ಐಆರ್ ದಾಖಲಿಸಿದ ಹಿನ್ನಲೆಯಲ್ಲಿ ಜನಲೋಕಪಾಲ ಮಸೂದೆ ಮಂಡನೆಗೆ ವಿರೋಧ ವ್ಯಕ್ತವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.
ಇಂದು ದೆಹಲಿಯ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅಂಬಾನಿ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಹಿನ್ನಲೆಯಲ್ಲಿ ವಿಪಕ್ಷಗಳು ಜನಲೋಕಪಾಲ ಮಸೂದೆ ಮಂಡನೆಗೆ ವಿರೋಧ ವ್ಯಕ್ತಪಡಿಸಿವೆ. ಮುಖೇಶ್ ಅಂಬಾನಿಗಾಗಿ ಬಿಜೆಪಿ ಕಾಂಗ್ರೆಸ್ ಒಂದಾಗಿದ್ದು, ಅಂಬಾನಿ ಸಲಹೆ ಮೇರೆಗೆ ಒಗ್ಗಟ್ಟು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನಾವು ಮೊದಲ ಬಾರಿಗೆ ಗೆದ್ದು ಬಂದಿದ್ದೆವು. ದೆಹಲಿ ಜನತೆಗೆ ಮಸೂದೆ ಮಂಡನೆ ಮಾಡುವುದಾಗಿ ಭರವಸೆ ನೀಡಿದ್ದೇವು. ಆದರೆ ವಿಪಕ್ಷ ಸದಸ್ಯರ ವರ್ತನೆ ಬೇಸರ ತಂದಿದೆ ಎಂದು ಅವರು ವಿಷಾಧಿಸಿದ್ದಾರೆ.
ವಿಧಾನಸಭೆ ದೇವಾಲಯವಿದ್ದಂತೆ, ಮಂದಿರಕ್ಕೆ ಯಾರೊಬ್ಬರೂ ಅಪಮಾನ ಮಾಡಬಾರದು. ಸ್ಪೀಕರ್ ಮುಂದಿನ ಮೈಕ್ ಮುರಿಯುವುದು, ವಿಧೇಯಕದ ಪ್ರತಿ ಹರಿದು ಹಾಕುವುದು ಸರಿಯಲ್ಲ ಎಂದ ಅವರು ವಿಧಾನಸಭೆಯನ್ನು ಶಾಸಕರು ಗೌರವಿಸಬೇಕು ಎಂದು ತಿಳಿಸಿದ್ದಾರೆ.
ನನ್ನಿಂದ ಯಾರಿಗಾದರು ನೋವಾಗಿದ್ದರೇ ಕ್ಷಮಿಸಿ, ಕೆಲ ಸದಸ್ಯರ ವರ್ತನೆ ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ.