ದೆಹಲಿ ವಿಧಾನಸಭೆಯಲ್ಲಿ ಹೈಡ್ರಾಮಾ, ಜನಲೋಕಪಾಲ್ಗೆ ಸೋಲು
ಜನಲೋಕಪಾಲ್ ಜಾರಿಗೊಳಿಸುವುದಾಗಿ...
ನವದೆಹಲಿ: ಜನಲೋಕಪಾಲ್ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಪ್ರಥಮ ಪ್ರಯತ್ನದಲ್ಲೇ ಭಾರಿ ಮುಖಭಂಗವಾಗಿದೆ. ಪ್ರತಿಪಕ್ಷ ಹಾಗೂ ಉಪ ರಾಜ್ಯಪಾಲರ ವಿರೋಧದ ನಡುವೆಯೂ ದೆಹಲಿ ವಿಧಾನಸಭೆಯಲ್ಲಿ ಶುಕ್ರವಾರ ಜನಲೋಕಪಾಲ್ ಮಸೂದೆಯನ್ನು ಮಂಡಸಿಲಾಯಿತು.
ವಿರೋಧದ ನಡುವೆಯೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಧೇಯಕವನ್ನು ಮಂಡಿಸಿದರು. ಆದರೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ವಿಧೇಯಕದ ಮೇಲಿನ ಚರ್ಚೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಗದ್ದಲ ಉಂಟು ಮಾಡಿದವು.
ವಿಧೇಯಕದ ಮೇಲೆ ಚರ್ಚೆಗೆ ಸ್ಪೀಕರ್ ಸೂಚನೆ ನೀಡಿದರೂ ಪ್ರತಿಪಕ್ಷಗಳು ಚರ್ಚೆಗೆ ಅವಕಾಶ ನೀಡದಿದ್ದರಿಂದ ಹೈಡ್ರಾಮಾವೇ ನಡೆಯಿತು. ಪ್ರತಿಪಕ್ಷಗಳ ಕೋಲಾಹಲದಿಂದಾಗಿ ಸ್ಪೀಕರ್ ಅರ್ಧ ಗಂಟೆಗಳ ಕಾಲ ಕಲಾಪವನ್ನು ಮುಂದೂಡಿದರು.
ಅರ್ಧ ಗಂಟೆಯ ನಂತರ ಪುನಾ ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಮತ್ತೆ ಕೋಲಾಹಲ ಸೃಷ್ಟಿಸಿದವು. ಇದರಿಂದ ಸ್ಪೀಕರ್ ಅವರು ವಿಧೇಯಕ ಮಂಡನೆಯನ್ನು ಮತಕ್ಕೆ ಹಾಕಿದರು. ವಿಧೇಯಕ ಮಂಡನೆ ಪರವಾಗಿ 27 ಮತಗಳು ಹಾಗೂ ವಿಧೇಯಕ ಮಂಡನೆ ವಿರುದ್ಧವಾಗಿ 42 ಮತಗಳು ಬಿದ್ದಿವೆ. ಹೀಗಾಗಿ ವಿಧಾನಸಭೆಯಲ್ಲಿ ಜನಲೋಕಪಾಲ್ ಸೋಲು ಅನುಭವಿಸಿದೆ.
ವಿಧೇಯಕ ಮಂಡನೆಗೆ ಉಪ ರಾಜ್ಯಪಾಲ ನಜೀಬ್ ಜಂಗ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಸ್ಪೀಕರ್ಗೆ ಪತ್ರ ಬರೆದಿದ್ದ ಜಂಗ್, ಜನಲೋಕಪಾಲ್ ಮಸೂದೆ ಅಸಂವಿಧಾನಿಕವಾಗಿದ್ದು, ವಿಧಾನಸಭೆಯಲ್ಲಿ ಮಸೂದೆ ಮಂಡಿಸುವುದು ಬೇಡ ಎಂದು ಹೇಳಿದ್ದರು.