ನನ್ನ ಒಪ್ಪಿಗೆ ಇಲ್ಲದೆ ಜನಲೋಕಪಾಲ್ ಮಸೂದೆ ಮಂಡನೆ ಅಸಾಧ್ಯ: ದೆಹಲಿ ಉಪರಾಜ್ಯಪಾಲ
ಒಂದು ಕಡೆ ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಜನಲೋಕಪಾಲ್ ಮಸೂದೆ ಪಾಸ್ ಮಾಡದಿದ್ದರೆ ರಾಜಿನಾಮೆ ನೀಡುವುದಾಗಿ..
ನವದೆಹಲಿ: ಒಂದು ಕಡೆ ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಜನಲೋಕಪಾಲ್ ಮಸೂದೆ ಪಾಸ್ ಮಾಡದಿದ್ದರೆ ರಾಜಿನಾಮೆ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ. ಮತ್ತೊಂದು ಕಡೆ ನನ್ನ ಒಪ್ಪಿಗೆ ಇಲ್ಲದೆ ಮಸೂದೆ ಮಂಡನೆ ಸಾಧ್ಯವಿಲ್ಲ ಎಂದು ದೆಹಲಿ ಉಪ ರಾಜ್ಯಪಾಲ ನಜೀಬ್ ಜಂಗ್ ಗುಡುಗಿದ್ದಾರೆ.
ಜನಲೋಕಪಾಲ್ ಮಸೂದೆ ಅಸಂವಿಧಾನಿಕವಾಗಿದ್ದು, ವಿಧಾನಸಭೆಯಲ್ಲಿ ಮಸೂದೆ ಮಂಡಿಸುವುದು ಬೇಡ ಮತ್ತು ನನ್ನ ಅನುಮತಿ ಇಲ್ಲದೆ ಭ್ರಷ್ಟಾಚಾರ ವಿರೋಧಿ ಮಸೂದೆ ಮಂಡನೆ ಸಾಧ್ಯವಿಲ್ಲ ಎಂದು ನಜೀಬ್ ಜಂಗ್ ಅವರು ಇಂದು ದೆಹಲಿ ಸ್ಪೀಕರ್ಗೆ ಪತ್ರ ಬರೆದಿದ್ದಾರೆ.
ಆಮ್ ಆದ್ಮಿ ಪಕ್ಷ ಶುಕ್ರವಾರ ಜನಲೋಕಪಾಲ್ ಮಸೂದೆ ಮಂಡಿಸಲಿದೆ ಎಂದು ಅರವಿಂದ್ ಕೇಜ್ರಿವಾಲ್ ಅವರು ಹೇಳಿದ ಬೆನ್ನಲ್ಲೆ ನಜೀಬ್ ಜಂಗ್ ಅವರು ಈ ಹೇಳಿಕೆ ನೀಡಿದ್ದಾರೆ.
ಈ ಮಧ್ಯೆ ಮಸೂದೆ ಮಂಡನೆ ಸಂಬಂಧ ಎಎಪಿಯಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಪಕ್ಷ ಕಾನೂನು ಚೌಕಟ್ಟು ಪಾಲಿಸಬೇಕು ಎಂದು ಎಎಪಿ ನಾಯಕ ಅಶೋಕ್ ಅಗರವಾಲ್ ಹೇಳಿದ್ದಾರೆ.