ಪೆಪ್ಪರ್ ಸ್ಪ್ರೇ: ಕ್ಷಮೆಯಾಚಿಸಿದ ಸಂಸದ ಎಲ್.ರಾಜಗೋಪಾಲ್
ನವದೆಹಲಿ: ಲೋಕಸಭೆಯಲ್ಲಿ ತೆಲಂಗಾಣ ಮಸೂದೆ ಮಂಡನೆ ವೇಳೆ ಪೆಪ್ಪರ್ ಸ್ಪ್ರೇ(ಕರಿಮೆಣಸು ಪುಡಿ) ಎರಚಿದ್ದಕ್ಕೆ ಸೀಮಾಂಧ್ರ ಸಂಸದ ಎಲ್ ರಾಜಗೋಪಾಲ್ ಅವರು ಕ್ಷಮೆಯಾಚಿಸಿದ್ದಾರೆ.
ಸಂಸತ್‌ನಲ್ಲಿ ಈ ರೀತಿ ನಡೆಯಬಾರದಿತ್ತು. ಆದರೆ ನಾನು ಆತ್ಮರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಬಳಕೆ ಮಾಡಬೇಕಾಯಿತು. ಆದರೆ ನಮ್ಮ ವರ್ತನೆಗೆ ಕ್ಷಮೆಯಾಚಿಸುತ್ತೇವೆ. ನಿನ್ನೆ ನಡೆದ ಘಟನೆಯಿಂದ ನಾವೆಲ್ಲರು ತಲೆತಗ್ಗಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.
ತೆಲಂಗಾಣ ಮಸೂದೆ ಮಂಡನೆಗೆ ಮುಂದಾದಾಗ ವಿಜಯವಾಡಾದ ಕಾಂಗ್ರೆಸ್ ಸಂಸದ ರಾಜಗೋಪಾಲ್ ಅವರು ಕರಿಮೆಣಸು ಪುಡಿ ಎರಚುವ ಮೂಲಕ ಲೋಕಸಭಾ ಕಲಾಪಕ್ಕೆ ಧಕ್ಕೆಯನ್ನುಂಟು ಮಾಡಿದ್ದರು.
ಪೆಪ್ಪರ್ ಸ್ಪ್ರೇ ಬಳಸಿದ ಕಾರಣ ಸಂಸದರು ಕೆಮ್ಮುತ್ತಾ, ತಮ್ಮ ಕಣ್ಣುಗಳನ್ನು ಕರವಸ್ತ್ರದಿಂದ ಮುಚ್ಚುವ ದೃಶ್ಯ ಲೋಕಸಭೆಯಲ್ಲಿ ಕಂಡು ಬಂದಿತ್ತು. ಈ ಸಂದರ್ಭದಲ್ಲಿ ನೂಕುನುಗ್ಗಲು ಸಂಭವಿಸಿತ್ತು. ಇಷ್ಟೆಲ್ಲಾ ಸಮಸ್ಯೆಗಳಿಗೆ ಸೀಮಾಂಧ್ರದ ಸಂಸದರೇ ಕಾರಣ ಎಂಬ ಹಿನ್ನಲೆಯಲ್ಲಿ ಸಂಸದ ಎಲ್ ರಾಜಗೋಪಾಲ್ ಸೇರಿದಂತೆ 17 ಸಂಸದರನ್ನು ಲೋಕಸಭಾದಿಂದ ಅಮಾನತು ಮಾಡಲಾಗಿತ್ತು.