ಸಿದ್ದು ಬಜೆಟ್ ನಿರಾಶದಾಯಕ: ಶೆಟ್ಟರ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2014-15ನೇ ಸಾಲಿನ ಬಜೆಟ್ ನಿರಾಶದಾಯಕವಾಗಿದೆ...
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2014-15ನೇ ಸಾಲಿನ ಬಜೆಟ್ ತುಂಬಾ ನಿರಾಶದಾಯಕವಾಗಿದೆ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.
ಸಿದ್ದು ಬಜೆಟ್ ಮಂಡಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ಬಜೆಟ್ ಬಗ್ಗೆ ಇನ್ನು ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ನಮ್ಮ ಎಲ್ಲ ನಿರೀಕ್ಷೆಗಳನ್ನು ಸಿದ್ದರಾಮಯ್ಯ ಸುಳ್ಳು ಮಾಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಆವರ್ತ ನಿಧಿ ಮೀಸಲಿಟ್ಟಿಲ್ಲ. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಅಗತ್ಯ ಅನುದಾನ ನೀಡಬೇಕಿತ್ತು ಎಂದಿದ್ದಾರೆ.
ಹಣಕಾಸು ಇಲಾಖೆ ನಿರ್ವಹಣೆಯಲ್ಲೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ತೆರಿಗೆ ಸೋರಿಕೆ ತಡೆಗೆ ಸಿದ್ದು ಪ್ರಮಾಣಿಕ ಪ್ರಯತ್ನ ಮಾಡಿಲ್ಲ: ಬಿಎಸ್ವೈ
ಸಿದ್ದರಾಮಯ್ಯ ಅವರು ತಾವು ಮಂಡಿಸಿದ 9ನೇ ಬಜೆಟ್ನಲ್ಲಿ ತೆರಿಗೆ ಸೋರಿಕೆ ತಡೆಗೆ ಪ್ರಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ರೈತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಬರಪೀಡಿತ ಜಿಲ್ಲೆಗಳ ರೈತರಿಗೆ ಸರ್ಕಾರ ನೆರವು ನೀಡಿಲ್ಲ ಎಂದಿದ್ದಾರೆ. ಅಲ್ಲದೆ ಸರ್ಕಾರದ ಸಾಲದ ಮೊತ್ತ ಹೆಚ್ಚಳವಾಗಿದ್ದು, 25,396 ಕೋಟಿ ರುಪಾಯಿ ಇದ್ದ ಸಾಲ ಈಗ 25,402 ಕೋಟಿ ರುಪಾಯಿಗೆ ಏರಿಕೆಯಾಗಿದೆ ಎಂದು ತಿಳಿಸಿದರು.
ಯಾವುದೇ ಹೊಸ ಜನಪರ ಯೋಜನೆ ಈ ಬಜೆಟ್ ನಲ್ಲಿ ಕಾಣಲಿಲ್ಲ. ರೈತರಿಗೆ, ಕೃಷಿಗೆ, ಬಡವರಿಗೆ, ಜನಸಾಮಾನ್ಯರಿಗೆ ಯಾವುದೇ ಅಭಿವೃದ್ಧಿಪರ ಯೋಜನೆಯೇ ಇಲ್ಲ! ರಾಜ್ಯದ ಜನತೆಯ ನಿರೀಕ್ಷೆಗಳನ್ನೆಲ್ಲ ಕಾಂಗ್ರೆಸ್ ಸರ್ಕಾರ ಮಣ್ಣುಪಾಲು ಮಾಡಿದೆ.
ಸಮಾಜಮುಖಿ ಕೆಲಸವನ್ನು ಈ ಸರ್ಕಾರದಿಂದ ನಿರೀಕ್ಷಿಸುವುದೇ ದೊಡ್ಡ ತಪ್ಪೆಂದು ಜನರಿಗೆ ಅರಿವಾಗಿದೆ. ಒಟ್ಟಿನಲ್ಲಿ ೨-೩ ಗಂಟೆ ನಿಂತುಕೊಂಡು 'ಭಾಷಣ' ಮಾಡಿದ್ದೇ ಸಿದ್ದರಾಮಯ್ಯನವರ ಸಾಧನೆ!
- ಟಿ ಎ ಶರವಣ,
ಜೆ ಡಿ ಎಸ್ ಪ್ರಧಾನ ಕಾರ್ಯದರ್ಶಿ